Advertisement

ನದಿ ತಟಗಳಲ್ಲಿ ವಾಣಿಜ್ಯ ಚಟುವಟಿಕೆ ನಿಷೇಧಿಸಲು ಒತ್ತಾಯ

05:39 PM Apr 02, 2017 | Harsha Rao |

ಮಡಿಕೇರಿ : ಜೀವನದಿ ಕಾವೇರಿಯಲ್ಲಿ ದಿನ ಕಳೆದಂತೆ ನೀರಿನ ಹರಿವು ಕ್ಷೀಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣ ವಾಗಿರುವುದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ನದಿ ತಟಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಕಾವೇರಿ ನದಿ ಸ್ವತ್ಛತಾ ಆಂದೋಲನಾ ಸಮಿತಿ ಒತ್ತಾಯಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್‌. ಚಂದ್ರಮೋಹನ್‌, ದೇವರ ಪೂಜೆಗೂ ನದಿ ನೀರು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸರ ಕಾಳಜಿಯೊಂದಿಗೆ ಕಾವೇರಿ ನದಿಯ ಸಂರಕ್ಷಣೆಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮದ ನೆಪದಲ್ಲಿ ಪರಿಸರ ನಾಶವಾಗುತ್ತಿರುವುದಲ್ಲದೆ, ಕಾವೇರಿ ನದಿ ತಟ ಸಂಪೂರ್ಣವಾಗಿ ಮಲಿನವಾಗುತ್ತಿದೆ. ನೈಸರ್ಗಿಕವಾಗಿ ಹರಿಯುವ ನೀರಿಗೆ ರೆಸಾರ್ಟ್‌ಗಳು ತಡೆಗೋಡೆ ನಿರ್ಮಿಸುತ್ತಿರುವು ದರಿಂದ ನದಿಗೆ ನೀರು ಹರಿಯದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಆತಂಕಕಾರಿ ಜಲ ûಾಮವನ್ನು ರಾಜ್ಯದ ಜನ ಎದುರಿಸಬೇಕಾದ ಸ್ಥಿತಿ ಉದ್ಭವಿಸಬಹುದೆಂದು ಎಚ್ಚರಿಕೆ ನೀಡಿದರು.

ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗ ಧಾಮ, ಕಣಿವೆ ಸೇರಿದಂತೆ ಪುಣ್ಯಕ್ಷೇತ್ರಗಳಲ್ಲಿ ಪ್ರವಾಸಿಗರಿಂದ ನದಿ ನೀರು ಕಲುಷಿತಗೊಳ್ಳದಂತೆ ಸ್ಥಳೀಯ ಆಡಳಿತ ವ್ಯವಸ್ಥೆ ಕಠಿನ ಕ್ರಮಕೈಗೊಳ್ಳಬೇಕು, ಮುಂದಿನ ಎರಡು ತಿಂಗಳ ಕಾಲ ಕಾವೇರಿ ನದಿ ತಟ ಗಳಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ರ್ಯಾಫ್ಟಿಂಗ್‌ ಹಾಗೂ ಬೋಟಿಂಗ್‌ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ನಿರ್ಬಂಧಿಸಬೇಕು, ಜಿಲ್ಲೆಯಲ್ಲಿರುವ ಎಲ್ಲ ಜಲಮೂಲಗಳ ಸಂರಕ್ಷಣೆಗೆ ಸ್ಥಳೀಯ ಆಡಳಿತ ವ್ಯವಸ್ಥೆ ಕಾರ್ಯ ಯೋಜನೆಯನ್ನು ರೂಪಿಸಬೇಕು, ನಿಯಮ ಬಾಹಿರವಾಗಿ ನೈಸರ್ಗಿಕ ನೀರಿಗೆ ತಡೆಯೊಡ್ಡಿರುವ ರೆಸಾರ್ಟ್‌ಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ನದಿ ತಟದಲ್ಲಿ ನಿರ್ಮಾಣಗೊಂಡಿರುವ ಪೂಜಾ ಮಂದಿರಗಳ ಹಾಗೂ ಸಮುದಾಯ ಕೇಂದ್ರಗಳ ತ್ಯಾಜ್ಯ ವಿಲೇಗೆ ವೈಜ್ಞಾನಿಕವಾದ ಶಾಶ್ವತ ಯೋಜನೆಯನ್ನು ರೂಪಿಸುವ ಮೂಲಕ ನದಿ ಕಲುಷಿತಗೊಳ್ಳುವುದನ್ನು ತಡೆಯಬೇಕು. ಅಘೋಷಿತ ಪ್ರವಾಸಿಕೇಂದ್ರಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನದಿ ತಟದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿ ಕೆಗಳು, ಕೈಗಾರಿಕಾ ಸ್ಥಾವರಗಳು, ನದಿ ನೀರನ್ನು ಕಲುಷಿತ ಗೊಳಿಸುವ ಘಟಕಗಳು ಸ್ಥಾಪನೆಯಾಗದಂತೆ ಎಚ್ಚರ ವಹಿಸಬೇಕೆಂದ ಅವರು, ನದಿ ತಟಗಳಲ್ಲಿ ಮಾಂಸ – ಮಾರಾಟ ಮಳಿಗೆಗಳನ್ನು ತೆರೆಯದಂತೆ ಈಗಾಗಲೆ ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ಕೈಗೊಂಡಿದ್ದು, ಇದು ಸ್ವಾಗತಾರ್ಹವೆಂದರು. 

Advertisement

ರ್ಯಾಫ್ಟಿಂಗ್‌ ಮತ್ತು ಬೋಟಿಂಗ್‌ನಿಂದಾಗಿ ನದಿ ನೀರು ಕಲುಷಿತಗೊಂಡು ಜಲಚರಗಳ ಜೀವಕ್ಕೆ ಕುತ್ತು ಬರುತ್ತಿರುವುದಲ್ಲದೆ, ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಶುಂಠಿ ತೊಳೆಯುವ ಘಟಕಗಳಿಂದ ಹರಿಬಿಡುವ ನೀರು ಕೂಡ ವಿಷಕಾರಿಯಾಗಿದ್ದು, ಇವುಗಳನ್ನು ನಿಯಂತ್ರಿಸುವ ಅಗತ್ಯವಿದೆ. ದುಬಾರೆ ಒಂದು ಸಾಕಾನೆ ಶಿಬಿರವಾಗಿದೆ. ಆದರೆ, ಇದನ್ನು ಪ್ರವಾಸಿ ಕೇಂದ್ರದಂತೆ ಪ್ರತಿಬಿಂಬಿಸಿ ಪ್ರವಾಸಿಗರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗುತ್ತಿದೆ. ಕೊಡಗಿನಲ್ಲಿ ಪ್ರವಾಸಿ ತಾಣಗಳಲ್ಲಿ ಯಾವುದೇ ಭದ್ರತೆಯ ವ್ಯವಸ್ಥೆ ಇಲ್ಲವೆಂದು ಚಂದ್ರಮೋಹನ್‌ ಆರೋಪಿಸಿದರು.

ಪ್ರಾಣಿ-ಪಕ್ಷಿಗಳು ಕೂಡ ನೀರು ಕುಡಿಯಲು, ಮನುಷ್ಯರ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾವೇರಿ ನದಿ ಸಂರಕ್ಷಣೆ ಮತ್ತು ಸ್ವತ್ಛತೆಗಾಗಿ ಬಜೆಟ್‌ನಲ್ಲಿ ನಿರೀಕ್ಷಿತ ಯೋಜನೆಯನ್ನು ಘೋಷಿಸಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಸಮಿತಿಯ ಪ್ರಮುಖರಾದ ಕೆ.ಜಿ. ಮನು ಮಾತನಾಡಿ, ಕುಶಾಲನಗರ ಪಟ್ಟಣಕ್ಕೆ ಕಳೆದ 45 ವರ್ಷಗಳಿಂದ ಮರಳು ತಡೆಗೋಡೆಯನ್ನಷ್ಟೆ ನಿರ್ಮಿಸಿ ಕಾವೇರಿ ನದಿಯಿಂದ ನೀರು ಪಡೆಯ ಲಾಗುತ್ತಿದೆ. ಇದೀಗ 12 ಕೋಟಿ ರೂ. ವೆಚ್ಚದಲ್ಲಿ ಹಾರಂಗಿಯ ಮೂಲಕ ಕುಡಿಯುವ ನೀರು ಪಡೆಯಲು ಮುಂದಾಗಿರುವುದು ದುಂದು ವೆಚ್ಚದ ಯೋಜನೆಯಾಗಿದೆ ಎಂದು ಆರೋಪಿಸಿದರು. ಕಾವೇರಿ ನದಿ ನೀರನ್ನೆ ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next