Advertisement
ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಯವರು ಶನಿವಾರ ಬೆಳಗ್ಗೆ ಪ್ರಧಾನಿಯವರನ್ನು ಭೇಟಿ ಮಾಡಿ, ಮರು ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ನಂತರ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.
Related Articles
Advertisement
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿ: ಪ್ರಧಾನಿ ಭೇಟಿಗೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಸ್ಥಳೀಯರಿಗೆ ಅವಕಾಶ ಒದಗಿಸಲು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು.
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳನ್ನು ಸಂವಿಧಾನದಿಂದ ಮಾನ್ಯತೆ ನೀಡಲಾಗಿರುವ ಎಲ್ಲಾ 22 ಭಾಷೆಗಳಲ್ಲಿ ನಡೆಸಬೇಕು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅವಕಾಶ ಒದಗಿಸುವ ಕುರಿತು ನಿಯಮ ರೂಪಿಸಬೇಕು ಎಂದು ಕೋರಿದರು.
ಬಾಕಿ ಬಿಡುಗಡೆ ಮನವಿ: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ 2018-19ನೇ ಸಾಲಿಗೆ ಬಾಕಿ ಇರುವ 2,333 ಕೋಟಿ ರೂ. ಫರ್‌ಫಾರ್ಮನ್ಸ್ ಅನುದಾನವನ್ನು ಬಿಡುಗಡೆ ಮಾಡಬೇಕು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಬ್ಯಾಂಕ್ ಖಾತೆಯಲ್ಲಿರುವ ಹಣ ಹಾಗೂ ಇದರ ಬಡ್ಡಿಯ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತಿದ್ದು, ಇದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಕೋರಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಈ ವೇಳೆ ಉಪಸ್ಥಿತರಿದ್ದರು.
ಮೇಕೆದಾಟು ಯೋಜನೆಗೆ ಅನುಮತಿ ಕೊಡಿ: ಇದೇ ವೇಳೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು. ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಹಾಗೂ ಕೃಷ್ಣಾ ನ್ಯಾಯಾಧಿಕರಣದ ಗೆಜೆಟ್ ಅಧಿಸೂಚನೆ ಹೊರಡಿಸಿ, ಶೀಘ್ರವೇ ಯೋಜನೆಗಳ ಅನುಷ್ಟಾನಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವ ಬಗ್ಗೆ ಸಂಬಂಧಿಸಿದ ರಾಜ್ಯಗಳೊಂದಿಗೆ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.
ಮೇಕೆದಾಟು ಯೋಜನೆ ಕುರಿತು ವಿವರಣೆ: ಮೇಕೆದಾಟು ಅಣೆಕಟ್ಟು ಹಾಗೂ ಕುಡಿಯುವ ನೀರಿನ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಅನುಮೋದನೆಗಾಗಿ ಜನವರಿ 18ರಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸಲ್ಲಿಸಿದೆ. ಈ ಯೋಜನೆಯಡಿ 4.75 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಬಳಸಲಾಗುವುದು.
ಜೊತೆಗೆ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶ ಕೂಡ ಈ ಯೋಜನೆಯ ಹಿಂದಿದೆ. ಇದು ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ರಾಜ್ಯದ ನೆಲದಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಯಾದ ಕಾರಣ ಅನುಮತಿ ನೀಡಲು ತಮಿಳುನಾಡಿನ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಸಚಿವರಿಗೆ ಇದೇ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.
ಕೃಷ್ಣಾ ನ್ಯಾಯಾಧಿಕರಣ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿ: ಕೃಷ್ಣಾ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ರಾಜ್ಯಕ್ಕೆ 166 ಟಿಎಂಸಿ ನೀರನ್ನು ನೀರಾವರಿ ಹಾಗೂ ಇತರ ಉದ್ದೇಶಗಳಿಗೆ ಹಂಚಿಕೆ ಮಾಡಿದೆ. ಆದರೆ, ಕೃಷ್ಣಾ ನ್ಯಾಯಾಧಿಕರಣದ ಆದೇಶದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸದ ಕಾರಣ ರಾಜ್ಯದ ಪಾಲಿನ ನೀರಿನ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೀಘ್ರ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದರು.
ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ಸಹ ರಾಜ್ಯಕ್ಕೆ 13.2 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಆ ಕುರಿತು ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ ಕಾರಣ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ ನಗರಗಳ ಕುಡಿಯುವ ನೀರು ಪೂರೈಕೆ ಮಾಡುವ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಕಾವೇರಿ ಜಲವಿವಾದ ನ್ಯಾಯಾಧಿಕರಣ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರೂ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುವ ಷರತ್ತು ವಿಧಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ರೀತಿ, ಕೃಷ್ಣಾ ಹಾಗೂ ಮಹದಾಯಿ ನ್ಯಾಯಾಧಿಕರಣಗಳ ನೀರು ಹಂಚಿಕೆ ಕುರಿತು ನ್ಯಾಯಾಲಯದ ತೀರ್ಪು ನಿರೀಕ್ಷಿಸಿ ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದರು.
ಮನಮೋಹನ್ ಸಿಂಗ್‌ರನ್ನು ಭೇಟಿಯಾದ ಸಿಎಂ: ನೀತಿ ಆಯೋಗದ ಸಭೆಗೆ ಪೂರ್ವಭಾವಿಯಾಗಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಅವರೊಂದಿಗೆ ಚರ್ಚೆ ನಡೆಸಿದರು. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಅವರನ್ನೂ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ, ಚುನಾವಣೆಯಲ್ಲಿನ ಗೆಲುವಿಗೆ ಅಭಿನಂದನೆ ಸಲ್ಲಿಸಿದರು.