ಹತ್ತು ವರ್ಷಗಳ ನಂತರ “ಕಾಫಿ ತೋಟ’ ಚಿತ್ರ ಮಾಡಿರುವ ಟಿ.ಎನ್. ಸೀತಾರಾಂ ಅವರಿಗೆ ಚಿತ್ರ ಹೇಗೆ ಮೂಡಿ ಬರುವುದೋ ಎಂದು ಆರಂಭದಲ್ಲಿ ಆತಂಕವಿತ್ತಂತೆ. ಆದರೆ, ಇದೀಗ ಚಿತ್ರದ ಕಾಪಿಯನ್ನು ನೋಡಿದ ಮೇಲೆ ನಿರಾಳರಾಗಿದ್ದಾರೆ. ಚಿತ್ರ ಜನರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ನಂಬಿಕೆ ಅವರಿಗೆ ಬಂದಿದೆ.
“ಕಾಫಿ ತೋಟ’ ಚಿತ್ರವನ್ನು ಮುಂದಿನ ತಿಂಗಳ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿರುವ ಅವರು, ಅದಾಗುತ್ತಿದ್ದಂತೆಯೇ ಇನ್ನೊಂದು ಚಿತ್ರ ಶುರು ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಹೌದು, “ಕಾಫಿ ತೋಟ’ ಬಿಡುಗಡೆಯಾಗುತ್ತಿದ್ದಂತೆಯೇ ಹೊಸ ಚಿತ್ರ ಶುರು ಮಾಡಲಿದ್ದಾರಂತೆ ಸೀತಾರಾಂ. ಸದ್ಯಕ್ಕೆ ಚಿತ್ರಕ್ಕೆ ಹೆಸರಿಟ್ಟಿಲ್ಲ.
“ಕಾಫಿ ತೋಟ’ ಚಿತ್ರವನ್ನು ನಿರ್ಮಿಸಿದ್ದ ಮನ್ವಂತರ ಚಿತ್ರತಂಡದವರೇ ಈ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ. “ಸದ್ಯಕ್ಕೆ ನನ್ನ ಮನಸ್ಸಿನಲ್ಲಿ ಮೂರು ಕಥೆಗಳಿವೆ. ಮೂರು ಸಹ ಒಂದಕ್ಕಿಂತ ಒಂದು ವಿಭಿನ್ನವಾದ ಕಥೆಗಳೇ. ಮೂರರಲ್ಲಿ ಒಂದನ್ನು ಆಯ್ಕೆ ಮಾಡಬೇಕಿದೆ. ಆಯ್ಕೆಯಾಗುತ್ತಿದ್ದಂತೆ ಚಿತ್ರಕಥೆ ಬರೆಯುವುದಕ್ಕೆ ಕೂರುತ್ತೇನೆ.
“ಕಾಫಿ ತೋಟ’ ಚಿತ್ರವು ಬಿಡುಗಡೆಯಾಗುತ್ತಿದ್ದಂತೆಯೇ ಹೊಸ ಚಿತ್ರ ಶುರು ಮಾಡುತ್ತೇನೆ’ ಎನ್ನುತ್ತಾರೆ ಟಿ.ಎನ್. ಸೀತಾರಾಂ. ಈ ಮಧ್ಯೆ, “ವಾಸ್ತು ಪ್ರಕಾರ’ ಚಿತ್ರದ ನಂತರ ಸದ್ದಿಲ್ಲದೆ ಅವರು, ಅಶೋಕ್ ಕಶ್ಯಪ್ ನಿರ್ದೇಶನದ ಚಿತ್ರದಲ್ಲಿ ಸಜ್ಜನ ರಾಜಕಾರಣಿಯ ಪಾತ್ರವನ್ನು ಮಾಡಿದ್ದಾರೆ.
“ಅಭಿನಯ ಮಾಡುವುದಕ್ಕೆ ಸಾಕಷ್ಟು ಆಫರ್‌ಗಳು ಬರುತ್ತಿವೆ. ಆದರೆ, ಎಲ್ಲಾ ಪಾತ್ರಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ಅಶೋಕ್ ಕಶ್ಯಪ್ ನನ್ನ ಕ್ಯಾಮೆರಾಮ್ಯಾನ್. ಅವರು ಚಿತ್ರ ನಿರ್ದೇಶಿಸಿದ್ದಾರೆ. ಅವರು ಬಂದು ಒಂದು ಪಾತ್ರ ಮಾಡುವುದಕ್ಕೆ ಕೇಳಿದರು. ಹಾಗಾಗಿ ಮಾಡಿದೆ’ ಎನ್ನುತ್ತಾರೆ ಅವರು.