ಚೆನ್ನೈ : ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಸಲೆಮ್ ಎಂಬಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಇಂದು ದೇಶದಾದ್ಯಂತ ನೀಟ್ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಯ ದಿನವೇ 19 ವರ್ಷ ವಯಸ್ಸಿನ ಧನುಷ್ ತನ್ನ ರೂಮಿನಲ್ಲಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ.
ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದ ವೈದ್ಯಕೀಯ ಸೀಟ್ ಪಡೆಯಲೆಂದು ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದ. ಈ ಹಿಂದೆ ಎರಡು ಬಾರಿ ಪ್ರಯತ್ನಿಸಿದ್ದರೂ ಪರೀಕ್ಷೆ ಪಾಸಾಗಿರಲಿಲ್ಲ. ಈ ಬಾರಿಯಾದರೂ ಎಕ್ಸಾಂ ತೇರ್ಗಡೆಯಾಗಬೇಕೆಂದು ಆತನ ಮನೆಯವರು ಕೂಡ ಒತ್ತಡ ಹೇರಿದ್ದರು. ಇದರಿಂದ ಭಯಗೊಂಡ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸ್ಥಳದಲ್ಲಿ ಡೆತ್ ನೋಟ್ ದೊರೆತಿಲ್ಲ. ಆತ ಮಾನಸಿಕ ಒತ್ತಡದಲ್ಲಿದ್ದ ಎಂದು ಆತನ ಪೋಷಕರು ಪೊಲೀಸರು ಎದುರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು (ನೀಟ್) ಇಂದು (ಸೆ.12, ಭಾನುವಾರ) ನಡೆಯುತ್ತಿದೆ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಟಿಎ) ಪರೀಕ್ಷೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿತ್ತು. ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ಪರೀಕ್ಷೆ ನಡೆಯುತ್ತಿದೆ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಲಭಿಸಿದೆ. ಈ ಸಂಬಂಧ ಪರೀಕ್ಷೆ ಮುಂದೂಡುವಂತೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದು, ಕೆಲವು ವಿದ್ಯಾರ್ಥಿಗಳ ಮನವಿಯ ಮೇರೆಗೆ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿತ್ತು.