ಚೆನ್ನೈ: ತಮಿಳುನಾಡಿನ ಪಶ್ಚಿಮ ತಿರುವಳ್ಳೂರ್ ಜಿಲ್ಲೆಯ ಬಿಜೆಪಿ ಘಟಕದ ಕಾರ್ಯದರ್ಶಿ ಸತೀಶ್ ಕುಮಾರ್ ಪೊಲೀಸರ ಅತಿಥಿಯಾಗಿದ್ದಾರೆ.
ಇತ್ತೀಚೆಗೆ, ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರಿಗೆ ಯಾರೋ ಬೆಂಕಿ ಇಟ್ಟಿರುವುದಾಗಿ ಪೊಲೀಸರಲ್ಲಿ ದೂರು ಕೊಟ್ಟಿದ್ದರು. ಆದರೆ, ತನಿಖೆಯಲ್ಲಿ ಅವರೇ ಕಾರಿಗೆ ಬೆಂಕಿಯಿಟ್ಟಿರುವುದು ಸಾಬೀತಾಗಿದ್ದರಿಂದ ಅವರನ್ನು ಅವರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿದಾಗ ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ.
ಸತೀಶ್ ಅವರ ಪತ್ನಿ ಚಿನ್ನಾಭರಣ ಕೊಡಿಸಬೇಕೆಂದು ತುಂಬಾ ದಿನಗಳಿಂದ ಪೀಡಿಸುತ್ತಿದ್ದರು. ಆದರೆ, ಹಣದ ಕೊರತೆಯಿದ್ದಿದ್ದರಿಂದ ಆಸೆಯನ್ನು ಈಡೇರಿಸಲು ಸತೀಶ್ ಹೊಸ ಐಡಿಯಾ ಮಾಡಿದ್ದಾರೆ.
ಒಂದು ರಾತ್ರಿ, ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿಯಿಟ್ಟು ಮನೆಯೊಳಗೆ ಹೋಗಿದ್ದರು. ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಹೋಗಿ ತಮ್ಮ ಕಾರು ಸುಟ್ಟುಹೋಗಿದೆ ಎಂದು ಪೊಲೀಸರಲ್ಲಿ ದೂರು ಸಲ್ಲಿಸಿದ್ದರು. ಸುಟ್ಟು ಹೋದ ಕಾರಿಗೆ ಬರುವ ವಿಮಾ ಪರಿಹಾರದ ಹಣದಲ್ಲಿ ಪತ್ನಿಗೆ ಆಭರಣ ಕೊಡಿಸುವುದು ಸತೀಶ್ ಉದ್ದೇಶವಾಗಿತ್ತು.
ದೂರಿನ ಆಧಾರದಲ್ಲಿ ತನಿಖೆ ನಡೆಸಲು ಮುಂದಾದ ಪೊಲೀಸರು, ಸತೀಶ್ ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಅವಲೋಕಿಸಿದಾಗ ಸತೀಶ್ ಅವರೇ ಕಾರಿಗೆ ಬೆಂಕಿಯಿಟ್ಟಿರುವುದು ತಿಳಿದುಬಂದಿದೆ. ಸುಳ್ಳು ದೂರು ದಾಖಲಿಸಿದ ಆರೋಪದಡಿ ಅವರನ್ನು ಬಂಧಿಸಲಾಗಿದೆ.