Advertisement
ಕರಾವಳಿ ಮತ್ತು ಮಲೆನಾಡಿನಲ್ಲಿ ನಮ್ಮ ರೈತರು ಜಾನುವಾರುಗಳಿಗೆ ಸಾಕಷ್ಟು ಆಹಾರ ನೀಡಿದರೂ ಬಯಲು ಸೀಮೆಯ ರೈತರ ಜಾನುವಾರುಗಳಿಗೆ ಹೋಲಿಸಿದರೆ ಅಷ್ಟೊಂದು ಆರೋಗ್ಯವಂತವಾಗಿರುವುದಿಲ್ಲ ಎಂಬ ಕೊರಗು ಇಲ್ಲಿಯ ರೈತರಲ್ಲಿದೆ. ಸಾಮಾನ್ಯವಾಗಿ ಭತ್ತದ ಹುಲ್ಲು, ಕರಡ, ಹಸಿರು ಮೇವು, ಹಿಂಡಿ ಮಿಶ್ರಣವನ್ನು ಇಲ್ಲಿಯವರು ಉಪಯೋಗಿಸಿದರೆ, ಬಯಲು ಸೀಮೆಯವರು ಜೋಳದ ದಂಟು, ಭತ್ತದ ಹುಲ್ಲು ಹಾಕುತ್ತಾರೆ. ಅವರು ಹಿಂಡಿಯನ್ನು ಅಷ್ಟಾಗಿ ಬಳಸುವುದಿಲ್ಲ. ಹವಾಮಾನ ವ್ಯತ್ಯಾಸ ಒಂದನ್ನು ಬಿಟ್ಟರೆ ಆಹಾರದ ಮೂಲದಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಆರೋಗ್ಯದಲ್ಲಿ ಮಾತ್ರ ಅಜಗಜಾಂತರ ಇದೆ.
Related Articles
Advertisement
ಟಿಎಂಆರ್ ಪದ್ಧತಿ ಎಂದರೇನು?: ಟಿಎಂಆರ್ ಪದ್ಧತಿ ಎಂದರೆ (ಟೋಟಲ್ ಮಿಕ್ಸ್‌ಡ್ ರೇಶನ್) ಒಟ್ಟಾರೆ ಮಿಶ್ರಣ ಆಹಾರ ಎಂದರ್ಥ. ಈ ಪದ್ಧತಿಯಲ್ಲಿ ಹುಲ್ಲು, ಹಸಿಹುಲ್ಲು, ಕರಡ ಇತ್ಯಾದಿಗಳನ್ನು ಸಣ್ಣದಾಗಿ ಕತ್ತರಿಸಿ ಅವುಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಿಂಡಿ, ಲವಣ ಮಿಶ್ರಣ, ಉಪ್ಪು, ಬೆಲ್ಲ ಸೇರಿಸಿ ಜಾನುವಾರು ಗಳಿಗೆ ನೀಡುವ ಪದ್ಧತಿಯೇ “ಟಿಎಂಆರ್ ಪದ್ಧತಿ’ ಎಂದು ಕರೆಯುತ್ತಾರೆ. ಇದನ್ನು ಇವುಗಳ ದೇಹದ ತೂಕ, ಹಾಲಿನ ಉತ್ಪಾದನೆ, ಗರ್ಭಧಾರಣೆಗೆ ಅನುಗುಣವಾಗಿ ನೀಡಬೇಕು.
ಟಿಎಂಆರ್ ಪದ್ಧತಿಯ ಉಪಯೋಗ1 ಒಟ್ಟಾರೆ ಒಣ ಪದಾರ್ಥ ಸೇವನೆ ಹೆಚ್ಚಳ. ಹುಲ್ಲು ರುಚಿಕರವಾಗಿರುವುದರಿಂದ ಜಾನುವಾರುಗಳು ಕಷ್ಟಪಟ್ಟು ತಿನ್ನದೇ ಇಷ್ಟಪಟ್ಟು ತಿನ್ನುತ್ತವೆ.
2 ಒಣ ಹುಲ್ಲು ಪೋಲು ತಡೆಗಟ್ಟಬಹುದು.
3 ಹಾಲಿನ ಪ್ರಮಾಣದಲ್ಲಿ ಹೆಚ್ಚಳ. ಪ್ರತಿಯೊಂದು ಕೆ.ಜಿ. ಒಣ ಮೇವಿನ ಹೆಚ್ಚುವರಿ ಸೇವನೆಯಿಂದ 0.9ರಿಂದ 1.5 ಲೀಟರ್ ಹಾಲು ಹೆಚ್ಚು ಉತ್ಪಾದನೆ ಮಾಡಬಹುದು.
4 ಜಿಡ್ಡಿನ ಪ್ರಮಾಣದಲ್ಲಿ ಹೆಚ್ಚಳ. ಜಾನುವಾರಿನ ಹೊಟ್ಟೆಯಲ್ಲಿ ರಸಸಾರ 6.2ರಿಂದ 6.8 ಇರುವುದರಿಂದ ಹೊಟ್ಟೆಯಲ್ಲಿ ಕ್ರಿಮಿಗಳು ಹೆಚ್ಚು ತಯಾರಾಗಿ ನೀರಿನ ಪದಾರ್ಥದ ಜೀರ್ಣಕ್ರಿಯೆ ಹೆಚ್ಚಾಗಿ ಆ್ಯಸಿಟಿಕ್ ಆಮ್ಲ ಹೆಚ್ಚು ತಯಾರಾಗಿ ಹಾಲಿನಲ್ಲಿ ಜಿಡ್ಡಿನ ಪ್ರಮಾಣ ಹೆಚ್ಚಳವಾಗುತ್ತದೆ.
5 ಆಹಾರ ಪದ್ಧತಿಯ ಏರುಪೇರಿನಿಂದ ಆಗುವ ಅಜೀರ್ಣ ತಡೆಗಟ್ಟಿದಂತಾಗುತ್ತದೆ.
6 ಗಮನಾರ್ಹವಾದ ಸಸಾರಜನಕ ಉತ್ಪಾದನೆಯಾಗುತ್ತದೆ. ರಸಸಾರ 6.2ರಿಂದ 6.8ರಲ್ಲಿ ಹೊಟ್ಟೆಯಲ್ಲಿರುವ ಕ್ರಿಮಿ ವೃದ್ಧಿಯಾಗಿ ಸಸಾರಜನಕ ಪ್ರಮಾಣ ಹೆಚ್ಚಳವಾಗುತ್ತದೆ.
7 ಲವಣ, ಹಿಂಡಿ ಮಿಶ್ರಣ ಪ್ರತ್ಯೇಕವಾಗಿ ನೀಡುವ ಆವಶ್ಯಕತೆ ಇಲ್ಲ.
8 ಈ ಪದ್ಧತಿಯಲ್ಲಿ ಜಾನುವಾರುಗಳು ಹುಲ್ಲು, ಹಿಂಡಿಯನ್ನು ಸಾವಕಾಶವಾಗಿ ಜಗಿದು ತಿನ್ನುವುದರಿಂದ ಜೊಲ್ಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದು ಆಹಾರದೊಂದಿಗೆ ಸರಿಯಾಗಿ ಬೆರೆತು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
9 ರೈತರು ಈ ಮಿಶ್ರಣವನ್ನು ಕನಿಷ್ಠ 3ರಿಂದ 4 ಬಾರಿ ನೀಡಬೇಕು. ಇದರಿಂದ ಆಹಾರ ಸಮಪ್ರಮಾಣದಲ್ಲಿ ಹೊಟ್ಟೆಗೆ ಸೇರಿ ತಿಂದ ಆಹಾರದ ಸಂಪೂರ್ಣ ಪ್ರಯೋಜನ ಇದಕ್ಕೆ ಲಭಿಸುತ್ತದೆ.
10 ಹಸಿರು ಮೇವು ಬಳಸುವಾಗ ಬಾಡಿಸಿ ನೀಡುವುದು ಉತ್ತಮ.
11 ಒಣ ಮೇವನ್ನು ಪುಷ್ಪೀಕರಿಸಿ ನೀಡುವ ಪದ್ಧತಿ ಅನುಸರಿಸುವ ರೈತರೂ ಸಹ ಈ ಹುಲ್ಲನ್ನು ಟಿಎಂಆರ್ ಪದ್ಧತಿ ಬಳಸಿ ನೀಡಬಹುದಾಗಿದೆ.
12 ಮಲೆನಾಡಿನಲ್ಲಿ ಹಾಳೆ, ಹೊಂಬಾಳೆ ಇತ್ಯಾದಿ ಕೃಷಿ ಉತ್ಪನ್ನ ಸಹ ಕಟಾವು ಮಾಡಿ ಈ ಪದ್ಧತಿ ಬಳಸಿ ನೀಡಬಹುದಾಗಿದೆ.
13 ಹಸಿ, ಒಣಹುಲ್ಲು ಎರಡೂ ಲಭ್ಯವಿದ್ದಾಗ ಶೇ. 50 ಒಣ ಹುಲ್ಲು, ಶೇ. 50 ಹಸಿಹುಲ್ಲು ಬೆರೆಸಿ ನೀಡುವುದು ಒಳ್ಳೆಯದು.
14 ಈ ತಣ್ತೀದಲ್ಲಿ ಅತಿ ಕೆಳಮಟ್ಟದ ಸಾಮಾನ್ಯ ಕ್ರಮದಲ್ಲಿ ಉಪಯೋಗಿಸಲಾಗದೆ ಇರುವ ಪದಾರ್ಥಗಳನ್ನು ಬಳಸಬಹುದಾಗಿದೆ. ಉದಾ: ಕಬ್ಬಿನ ಸಿಪ್ಪೆ. - ಜಯಾನಂದ ಅಮೀನ್, ಬನ್ನಂಜೆ