ಕೋಲ್ಕತ : ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ಮಾಜಿ ಜಿಲ್ಲಾ ಅಧ್ಯಕ್ಷೆ ಕೃಷ್ಣಾ ಭಟ್ಟಾಚಾರ್ಯ ಅವರ ಮನೆಯ ಮೇಲೆ ಬಾಂಬ್ ಎಸೆದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
‘ನ್ಯೂಸ್ ರಿಪಬ್ಲಿಕ್’ ಮಾಡಿರುವ ವರದಿಯ ಪ್ರಕಾರ ಟಿಎಂಸಿ ನೇತೃತ್ವದ ದುರ್ಷರ್ಮಿಗಳ ದಾಳಿಯಲ್ಲಿ ಭಟ್ಟಾಚಾರ್ಯ ಅವರಿಗೆ ಗಾಯಗಳಾಗಿವೆ. ಮಂಗಳವಾರ ರಾತ್ರಿ ಸುಮಾರು 9.30ರ ಹೊತ್ತಿಗೆ ಈ ದಾಳಿ ನಡೆದಿದೆ.
ದಾಳಿಕೋರರು ಕೃಷ್ಣಾ ಭಟ್ಟಾಚಾರ್ಯ ಅವರ ಮೇಲೆ ಹಲ್ಲೆ ನಡೆಸಿ, ಅವರ ಮನೆಯೊಳಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ದಾಳಿಕೋರರು ನಡೆಸಿದ ತೀವ್ರವಾದ ದಾಳಿಯಲ್ಲಿ ತಾನು ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನಳಾದೆ ಎಂದು ಕೃಷ್ಣಾ ಅವರು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಟಿಎಂಸಿಯ ಸಂಸದ ಸುದೀಪ ಬಂದೋಪಾಧಾಯಯ ಅವರನ್ನು ಬಂಧಿಸಲಾದುದಕ್ಕೆ ಪ್ರತಿಯಾಗಿ ಆಕ್ರೋಷಿತ ತೃಣಮೂಲ ಕಾಂಗ್ರೆಸ್ನ ವಿದ್ಯಾರ್ಥಿ ದಳದ ಕಾರ್ಯಕರ್ತರು ನಿನ್ನೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯಾಲಯದ ಮೇಲೆ ದಾಳಿ ನಡೆಸಿದ್ದರು.
ತೃಣಮೂಲ ಕಾಂಗ್ರೆಸ್ನ ಕ್ಷಾತ್ರ ಪರಿಷತ್ ಕಾರ್ಯಕತರರು ಬಿಜೆಪಿ ಕಾರ್ಯಾಲಯದ ಮೇಲೆ ಕಲ್ಲೆಸೆದು ದಾಳಿ ನಡೆಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ.
ಕಲ್ಲೆಸೆತದ ಈ ದಾಳಿಯಲ್ಲಿ 15ರಷ್ಟು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.