ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ
ನಾದಿನಿ ಮೇನಕಾ ಗಂಭೀರ್ ಅವರನ್ನು ಶನಿವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ತಡೆದು, ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಸೆಪ್ಟೆಂಬರ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಮೇನಕಾ ಗಂಭೀರ್ ರಾತ್ರಿ 9 ಗಂಟೆ ಸುಮಾರಿಗೆ ಬ್ಯಾಂಕಾಕ್‌ಗೆ ತೆರಳುತ್ತಿದ್ದರು. ಮೂಲಗಳ ಪ್ರಕಾರ, ಇಡಿ ಯು ಮೇನಕಾ ವಿರುದ್ಧ ಹೊರಡಿಸಿದ ಲುಕ್ ಔಟ್ ಸುತ್ತೋಲೆ ಆಧಾರದ ಮೇಲೆ ವಲಸೆ ಕ್ಲಿಯರೆನ್ಸ್ ನಿರಾಕರಿಸಲಾಗಿದೆ. ಅವರು ವಿಮಾನ ನಿಲ್ದಾಣವನ್ನು ತಲುಪಿದಾಗ , ಅವರನ್ನು ಪ್ರಶ್ನಿಸಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮೇನಕಾ ರಾತ್ರಿ 7.45 ರ ಸುಮಾರಿಗೆ ವಿಮಾನ ನಿಲ್ದಾಣವನ್ನು ತಲುಪಿದರು. ನಂತರ ರಾತ್ರಿ 9.10 ಕ್ಕೆ ಅವರ ವಿಮಾನ ಇತ್ತು. ಆದರೆ ಸೆಕ್ಯುರಿಟಿ ಕ್ಯಾಮೆರಾದಲ್ಲಿ ಮೇನಕಾ ಚಿತ್ರ ಸೆರೆಯಾದ ಕೂಡಲೇ ಸೆಕ್ಯುರಿಟಿ ಅಲಾರಂ ಮೊಳಗತೊಡಗಿತು. ಇದಾದ ನಂತರ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ತಂಡವು ಅವರನ್ನು ಸುತ್ತುವರೆದು ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.
ಸಮನ್ಸ್
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಕೋಲ್ಕತಾದ ಸಾಲ್ಟ್ ಲೇಕ್ ಪ್ರದೇಶದ ಕಚೇರಿಯಲ್ಲಿ ಸೋಮವಾರ (ಸೆ.12) ಬೆಳಗ್ಗೆ 11 ಗಂಟೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಲಾಗಿದೆ.
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ಮಾಸ್ಟರ್ ಮೈಂಡ್ ಅನೂಪ್ ಮಾಝಿ ಅಲಿಯಾಸ್ ಲಾಲಾ ಅವರು ಅಭಿಷೇಕ್ ಬ್ಯಾನರ್ಜಿಗೆ ನಿಕಟವರ್ತಿ ಎಂದು ಆರೋಪಿಸಲಾಗಿದೆ. ಲಾಲಾ ಅವರ ಖಾತೆಯಿಂದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವಿದೇಶಕ್ಕೆ ವರ್ಗಾವಣೆಯಾಗಿದೆ. ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಮತ್ತು
ಮೇನಕಾ ಗಂಭೀರ್ ಅವರ ಬ್ಯಾಂಕಾಕ್ ಮೂಲದ ಖಾತೆಗಳನ್ನು ಬಳಸಲಾಗಿದೆ. ಇಬ್ಬರೂ ಮೂಲತಃ ಬ್ಯಾಂಕಾಕ್‌ನಲ್ಲಿ ಬೆಳೆದವರು ಮತ್ತು ಅವರ ಪೋಷಕರು ಅಲ್ಲಿ ವಾಸಿಸುತ್ತಿದ್ದಾರೆ.