ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕೇಂದ್ರ ಚುನಾವಣ ಆಯೋಗದ ಕಚೇರಿ ಮುಂದೆ ಸೋಮವಾರ ಹೈಡ್ರಾಮಾ ನಡೆದಿದೆ.
ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳ ವಿರುದ್ಧ ಛೂ ಬಿಡುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ನ 10 ನಾಯಕರ ನಿಯೋಗವು ಸೋಮವಾರ ಸಂಜೆ ಕೇಂದ್ರ ಚುನಾವಣ ಆಯೋಗಕ್ಕೆ ದೂರು ಸಲ್ಲಿಸಿತು. ಅಲ್ಲದೇ ಅಲ್ಲಿಂದ ಹೊರಬರುತ್ತಲೇ ಟಿಎಂಸಿ ನಾಯಕರು ಆಯೋಗದ ಕಚೇರಿ ಹೊರಗೆ ಏಕಾಏಕಿ ಧರಣಿ ಕುಳಿತಿದ್ದು, ಗೊಂದಲಕ್ಕೆ ಕಾರಣವಾಯಿತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಐಎ, ಸಿಬಿಐ, ಇ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳ ಮುಖ್ಯಸ್ಥರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ 24 ಗಂಟೆಗಳ ಕಾಲ ಧರಣಿ ನಡೆಸುವುದಾಗಿ ಟಿಎಂಸಿ ನಿಯೋಗ ಹೇಳಿತು. ಕೂಡಲೇ ಅಲ್ಲಿಗೆ ಬಂದ ಪೊಲೀಸರು, ಡೆರೆಕ್ ಒಬ್ರಿಯಾನ್, ಸಾಗರಿಕಾ ಘೋಷ್, ಸಾಕೇತ್ ಗೋಖಲೆ ಸೇರಿದಂತೆ ಟಿಎಂಸಿ ನಾಯಕರನ್ನು ವಶಕ್ಕೆ ಪಡೆಯಲು ಮುಂದಾದರು. ಅವರು ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ನಾಯಕರನ್ನು ಎತ್ತಿಕೊಂಡು ಹೋಗಿ ಪೊಲೀಸ್ ವಾಹನಗಳಿಗೆ ತುಂಬಲಾಯಿತು. ಆದರೆ ನಾವು ಠಾಣೆಯಲ್ಲೂ ಧರಣಿ ಮುಂದುವರಿಸುತ್ತೇವೆ ಎಂದು ನಾಯಕರು ಹೇಳಿದರು.
ನಾವು ಕಿಡ್ನ್ಯಾಪ್ ಆಗಿದ್ದೇವೆ
ನಮ್ಮ ಪಕ್ಷದ 5 ಸಂಸದರು, 4 ಮಾಜಿ ಸಂಸದರನ್ನು ದಿಲ್ಲಿ ಪೊಲೀಸರು ಅಪಹರಿಸಿದ್ದಾರೆ. ಮಂದಿರ್ ಮಾರ್ಗ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ, ಬಸ್ಸನ್ನು ಏಕಾಏಕಿ ಬೇರೆಡೆ ತಿರುಗಿಸಿ, ಗೊತ್ತೇ ಇಲ್ಲದ ಕಡೆಗೆ ಕರೆದೊಯ್ಯುತ್ತಿದ್ದಾರೆ.
ಸಾಕೇತ್ ಗೋಖಲೆ, ಟಿಎಂಸಿ ನಾಯಕ
ಆಗಿದ್ದೇನು?
ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಿಸಿ ಕೇಂದ್ರದ ವಿರುದ್ಧ ಆಯೋಗಕ್ಕೆ ದೂರು ನೀಡಿದ ಟಿಎಂಸಿ ನಿಯೋಗ
ಹೊರಬಂದು ಆಯೋಗದ ಕಚೇರಿ ಮುಂದೆ ಧರಣಿ ಆರಂಭಿಸಿದ ನಾಯಕರು
ಎನ್‌ಐಎ, ಇ.ಡಿ., ಸಿಬಿಐ, ಐಟಿ ಇಲಾಖೆ ಮುಖ್ಯಸ್ಥರ ಬದಲಾವಣೆಗೆ ಆಗ್ರಹ
24 ಗಂಟೆ ಇಲ್ಲೇ ಧರಣಿ ಕೂರುತ್ತೇವೆ ಎಂದು ಪಟ್ಟು. ಎಲ್ಲ ನಾಯಕರನ್ನೂ ವಶಕ್ಕೆ ಪಡೆದ ಪೊಲೀಸರು