Advertisement

ನ್ಯಾಯ ಯಾತ್ರೆಗೆ TMC ಸರಕಾರ ಅಡ್ಡಿ: ಕಾಂಗ್ರೆಸ್‌

12:26 AM Jan 27, 2024 | Team Udayavani |

ಸಿಲಿಗುರಿ: ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್‌ನ ಭಾರತ್‌ ನ್ಯಾಯ ಜೋಡೋ ಯಾತ್ರೆಯ ವೇಳೆ ಸಾರ್ವಜನಿಕ ಸಭೆಯನ್ನು ನಡೆಸಲು ಅನುಮತಿ ನೀಡಲು ಸರಕಾರ ವಿನಾಕಾರಣ ಅಡಚಣೆ ಉಂಟು ಮಾಡುತ್ತಿದೆ ಎಂದು ಪಶ್ಚಿಮ ಬಂಗಾಲದ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಅಧಿರ್‌ ರಂಜನ್‌ ಚೌಧರಿ ಆರೋಪಿಸಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತ ನಾಡಿದ ಚೌಧರಿ, ಯಾತ್ರೆಯ ಅವಧಿಯ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ಬಹಳ ಸಮಯದ ಮೊದಲೇ ನೀಡಲಾಗಿದೆ. ಆದರೂ ಕೆಲವು ಪ್ರದೇಶಗಳಲ್ಲಿ ಪರೀಕ್ಷೆಯ ನೆಪ ಒಡ್ಡಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಈಗಾಗಲೇ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲೂ ನ್ಯಾಯ ಯಾತ್ರೆ ಸಮಸ್ಯೆಗಳನ್ನು ಎದುರಿಸಿದೆ. ಇದೀಗ ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಲದಲ್ಲೂ ಸಮಸ್ಯೆ ಎದುರಾಗುತ್ತಿದೆ ಎಂದರು. ಕಾಂಗ್ರೆಸ್‌ ಜತೆಗೆ ಟಿಎಂಸಿ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿರುವಂತೆಯೇ ಪಶ್ಚಿಮ ಬಂಗಾಲದಲ್ಲಿ ರಾಹುಲ್‌ ಗಾಂಧಿ ಅವರ ಯಾತ್ರೆಗೆ ಅನುಮತಿ ನಿರಾಕರಿಸಿರುವುದು ಮಹತ್ವ ಪಡೆದಿದೆ.

ಸಿಲಿಗುರಿಯಲ್ಲಿ ಸಭೆಯನ್ನು ಆಯೋಜಿಸಲು ಅನುಮತಿಯನ್ನು ನಿರಾಕರಿಸಿದ್ದಾರೆ. ರಾಜ್ಯ ಸರಕಾರದಿಂದ ಉತ್ತಮ ಸಹಕಾರವನ್ನು ನಾವು ನಿರೀಕ್ಷಿಸಿದ್ದೆವು. ನ್ಯಾಯ ಯಾತ್ರೆಗೆ ಪ.ಬಂಗಾಲದ ಸಾರ್ವಜನಿಕ ಸಭೆಯ ಸಂದರ್ಭ ಸ್ವಲ್ಪ ವಿಶ್ರಾಂತಿಗೆ ಅವಕಾಶ ದೊರೆಯುತ್ತದೆ ಎಂದು ಭಾವಿಸಿದ್ದೆವು. ಆದರೆ ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಚೌಧರಿ ದೂರಿದರು.

ಅಧೀರ್‌ ಬಿಜೆಪಿ ಏಜೆಂಟ್‌!: ಅಧಿರ್‌ ಚೌಧರಿ ಬಿಜೆಪಿಯ ಏಜೆಂಟ್‌ ಆಗಿದ್ದಾರೆ. ಇಂದು ಕೇಸರಿ ಪಕ್ಷದ ಆದೇಶದಂತೆ ಈ ಆರೋಪಗಳನ್ನು ಮಾಡುತ್ತಿದ್ದಾರೆ. ಯಾತ್ರೆಯ ಅನುಮತಿಯ ವಿಚಾರಕ್ಕೂ ಟಿಎಂಸಿಗೂ ಯಾವುದೇ ಸಂಬಂಧವಿಲ್ಲ ಎಂದು ಟಿಂಎಂಸಿ ವಕ್ತಾರ ಕುನಾಲ್‌ ಘೋಷ್‌ ಹೇಳಿದ್ದಾರೆ.

ಇಂಡಿಯಾ ಒಕ್ಕೂಟಕ್ಕೆ ಇದು ಕೊನೆಯ ಮೊಳೆ: ಅಮಿತ್‌ ಮಾಳವೀಯ
ಕಾಂಗ್ರೆಸ್‌ ಪಕ್ಷಕ್ಕೆ ಅವಮಾನಿಸಲೆಂದೇ ಮಮತಾ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿಯ ಪಶ್ಚಿಮ ಬಂಗಾಲ ಉಸ್ತುವಾರಿ ಅಮಿತ್‌ ಮಾಳವೀಯ, ಮಮತಾ ಅವರು, ಕಾಂಗ್ರೆಸ್‌ನ ನ್ಯಾಯ ಯಾತ್ರೆಗೆ ಅನುಮತಿ ನಿರಾಕರಿಸುವ ಮೂಲಕ ಇಂಡಿಯಾ ಒಕ್ಕೂಟದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದರ ನಡುವೆ ಕಾಂಗ್ರೆಸ್‌, ಮಮತಾ ಅವರನ್ನು 5 ನಿಮಿಷದ ಮಟ್ಟಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ನ ದಯನೀಯ ಸ್ಥಿತಿಗೆ ಮರುಕವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next