Advertisement

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ?

01:18 PM Mar 09, 2021 | Team Udayavani |

ಮಣಿಪಾಲ: ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಅಖಾಡ ರಂಗೇರತೊಡಗಿದ್ದು, ಮತ್ತೊಂದೆಡೆ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದಿನದಿಂದ ದಿನಕ್ಕೆ ಹಿನ್ನಡೆಯಾಗತೊಡಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಟಿಕೆಟ್ ನಿರಕಾರಿಸಿದ ಹಿನ್ನೆಲೆಯಲ್ಲಿ ಐವರು ಹಾಲಿ ಶಾಸಕರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾದ ಪರಿಣಾಮ ಇತ್ತೀಚೆಗೆ ತೃಣ ಮೂಲ ಕಾಂಗ್ರೆಸ್ ಮಾಲ್ಡಾ ಜಿಲ್ಲಾ ಪರಿಷತ್ ನಲ್ಲಿ ಅಧಿಕಾರ ಕಳೆದುಕೊಂಡಿತ್ತು.!

Advertisement

ಇದನ್ನೂ ಓದಿ:ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!

ಟಿಎಂಸಿ ಪ್ರಭಾವಿ ಸಚಿವ ಸುವೇಂದು ಅಧಿಕಾರಿ ತಮ್ಮ 35 ಮಂದಿ ನಾಯಕರ ಜತೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ಸೋಮವಾರ(ಮಾರ್ಚ್ 08) ಟಿಎಂಸಿಯ ಐವರು ಶಾಸಕರು, ಸಂಸದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಒಂದೇ ದಿನದಲ್ಲಿ 23 ಸದಸ್ಯರು(ಟಿಎಂಸಿ) ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮ 38 ಸದಸ್ಯ ಬಲದ ಮಾಲ್ಡಾ ಜಿಲ್ಲಾ ಪರಿಷತ್ ಬಿಜೆಪಿ ವಶವಾಗಿದೆ.

ನಾಲ್ಕು ಬಾರಿ ಟಿಎಂಸಿ ಶಾಸಕಿಯಾಗಿದ್ದ ಸೋನಾಲಿ ಗುಹಾ ತೃಣಮೂಲ ಕಾಂಗ್ರೆಸ್ ವರಿಷ್ಠೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ನಿಕಟವರ್ತಿಯಾಗಿದ್ದು, ಎರಡು ದಶಕಗಳ ಕಾಲ ಪಕ್ಷದಲ್ಲಿದ್ದ ಗುಹಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಸಿಂಗೂರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ 80ವರ್ಷದ ರವೀಂದ್ರ ಭಟ್ಟಾಚಾರ್ಯಗೂ ಕೂಡಾ ಟಿಕೆಟ್ ನಿರಾಕರಿಸಲಾಗಿದೆ.

Advertisement

ಸೋನಾಲಿ ಗುಹಾ ಮತ್ತು ಭಟ್ಟಾಚಾರ್ಯ ಇದೀಗ ಟಿಎಂಸಿ ತೊರೆದು ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸಿದ್ದು, ಇದರಿಂದಾಗಿ ಸಿಂಗೂರು ಮತ್ತು ನಂದಿಗ್ರಾಮದ ಪ್ರಮುಖ ಟಿಎಂಸಿ ಮುಖಂಡರನ್ನು ಕಳೆದುಕೊಂಡಂತಾಗಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ಎಡಪಕ್ಷ ಸರ್ಕಾರ ಸಿಂಗೂರು ಬಳಿ ಜಮೀನು ಮಂಜೂರು ಮಾಡಿತ್ತು. ಆದರೆ ಸಿಂಗೂರ್ ರೈತರ ಭೂಮಿಯ ಪರವಾಗಿ ಹೋರಾಡಿದ್ದ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ 34 ವರ್ಷಗಳ ಕಾಲ ಅಧಿಕಾರದ ಗದ್ದುಗೆಯಲ್ಲಿದ್ದ ಎಡಪಕ್ಷಗಳ ಅಧಿಪತ್ಯವನ್ನು ಕೊನೆಗೊಳಿಸಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.

ಸಿಂಗೂರು, ನಂದಿಗ್ರಾಮದ ಹೋರಾಟದ ಮೂಲಕವೇ ಜನಪ್ರಿಯರಾಗಿದ್ದ ಮಮತಾ ಬ್ಯಾನರ್ಜಿಗೆ ಇದೀಗ ನಂದಿಗ್ರಾಮದಲ್ಲಿ ಟಿಎಂಸಿ ಮಾಜಿ ಸಚಿವ ಸುವೇಂದು ಅಧಿಕಾರಿ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ಸಡ್ಡು ಹೊಡೆದಿದ್ದಾರೆ.

ಟಿಕೆಟ್ ನಿರಾಕರಿಸಲ್ಪಟ್ಟ ಟಿಎಂಸಿಯ ಜಾಟು ಲಾಹಿರಿ, ಮಾಜಿ ಫುಟ್ಬಾಲ್ ಆಟಗಾರ ದಿಪೇಂದು ಬಿಸ್ವಾಸ್, ಶೀತಲ್ ಸರ್ದಾರ್ ಕೂಡಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕುಟುಂಬ ರಾಜಕಾರಣ ದೀದಿಗೆ ಮುಳುವಾಗುತ್ತಿದೆಯೇ?

ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹೆಚ್ಚು ಕಾಲ ಜನಪ್ರಿಯ ಪಕ್ಷವಾಗಿರಲ್ಲ, ಇದು ಕೂಡಾ ಕುಟುಂಬ ರಾಜಕಾರಣದ ಪಕ್ಷವಾಗಲಿದೆ. ನಿಷ್ಠಾವಂತರಿಗೆ ಟಿಎಂಸಿಯಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಭಟ್ಟಾಚಾರ್ಯ ಆರೋಪಿಸಿದ್ದಾರೆ.

ನಟಿ ತನುಶ್ರೀ ಚಕ್ರವರ್ತಿ ಬಿಜೆಪಿ ಸೇರ್ಪಡೆ ನಂತರ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಹಿರಿಯ ಮುಖಂಡ ಸುಗತಾ ರಾಯ್, ಟಿಎಂಸಿ ಮುಖಂಡರ ವಲಸೆಗೆ ಯಾವುದೇ ನೈತಿಕ ಮೌಲ್ಯವಿಲ್ಲ, ಕೇವಲ ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗಿದೆ, ಟಿಎಂಸಿ ಶೀಘ್ರದಲ್ಲಿಯೇ ವಿಭಜನೆಯಾಗಲಿದೆ ಎಂದು ಬಿಜೆಪಿ ಹೇಳಿದೆ. ಟಿಎಂಸಿ ವಿರುದ್ಧ ಹೋರಾಡುವವರು ಬಿಜೆಪಿ ಜತೆ ಕೈಜೋಡಿಸಬೇಕು ಎಂದು ಘೋಷ್ ಮನವಿ ಮಾಡಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 18 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಶ್ಚಿಮಬಂಗಾಳದಲ್ಲಿ ನೆಲೆ ಸ್ಥಾಪಿಸಿಕೊಂಡಿತ್ತು. ಹಿಂದಿನ ಚುನಾವಣೆಯಂತೆ ರಾಜ್ಯದ ಮತದಾರರು ಕೂಡಾ ಟಿಎಂಸಿ ಪರ ಹೆಚ್ಚು ಒಲವು ಹೊಂದಿಲ್ಲ ಎನ್ನಲಾಗಿದೆ. ಎಡಪಕ್ಷದ ನಂತರ ಅಧಿಕಾರಕ್ಕೇರಿದ್ದ ಟಿಎಂಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ ಎಂಬ ಆರೋಪವಿದೆ.  ಏತನ್ಮಧ್ಯೆ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ ನ 24 ಶಾಸಕರು, ಇಬ್ಬರು ಸಂಸದರು, ಕಾಂಗ್ರೆಸ್ ಪಕ್ಷದ ಮೂವರು ಹಾಗೂ ಸಿಪಿಐ(ಎಂ), ಸಿಪಿಐನ ತಲಾ ಒಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

294 ಸದಸ್ಯಬಲದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಹಣಾಹಣಿ ಏರ್ಪಡಲಿದೆ. ಮಾರ್ಚ್ 27ರಿಂದ ಸುಮಾರು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮಬಂಗಾಳದ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next