Advertisement

ಉಡುಪಿ:ಟಿಎಂಎ ಪೈ ಆಸ್ಪತ್ರೆ ಕೋವಿಡ್  19 ಚಿಕಿತ್ಸೆಗೆ ಮೀಸಲು

10:26 AM Apr 01, 2020 | sudhir |

ಉಡುಪಿ: ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯ ಸಮೂಹದ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯನ್ನು ಕೋವಿಡ್  19 ವೈರಸ್‌ ಖಚಿತವಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಡಾ| ಟಿಎಂಎ ಆಸ್ಪತ್ರೆಯಲ್ಲಿ 100 ಬೆಡ್‌ಗಳಿವೆ. ಇದರಲ್ಲಿ 11 ತೀವ್ರ ನಿಗಾ ಘಟಕ (ಐಸಿಯು), 15 ಹೈ ಡಿಪೆಂಡೆನ್ಸಿ ಯುನಿಟ್‌ (ಎಚ್‌ಡಿಯು), 36 ಖಾಸಗಿ ಕೊಠಡಿಗಳಿವೆ. ಅವುಗಳನ್ನು ಪ್ರತ್ಯೇಕ ಉದ್ದೇಶಕ್ಕಾಗಿ (ಐಸೋಲೇಶನ್‌) ಬಳಸಬಹುದು. ಇದಲ್ಲದೆ 43 ಸಾಮಾನ್ಯ ಬೆಡ್‌ಗಳಿವೆ. ಇದು ಜನರಲ್‌ ಆಸ್ಪತ್ರೆಯಾಗಿದ್ದು ಇಲ್ಲಿನ ರೋಗಿಗಳನ್ನು ಮಣಿಪಾಲ ಆಸ್ಪತ್ರೆಗೆ ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಡಾ| ಬಲ್ಲಾಳ್‌ ತಿಳಿಸಿದರು.

ಈಗಾಗಲೇ ಗುರುತಿಸಲಾದ ಮೂವರು ಕೋವಿಡ್  19 ಸೋಂಕಿತ ರೋಗಿಗಳನ್ನು ಡಾ| ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಮಣಿಪಾಲ ಮತ್ತು ಉಡುಪಿ ಆಸ್ಪತ್ರೆಯ ವೈದ್ಯರು, ದಾದಿಯರು, ಹೌಸ್‌ ಕೀಪಿಂಗ್‌ ಸಿಬಂದಿಯ ತಂಡವನ್ನು ರಚಿಸಲಾಗಿದ್ದು ಅವರು ಪಾಳಿಗಳಲ್ಲಿ ಕಾರ್ಯನಿರ್ವಹಿಸುವರು ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದರು.

ಹೆಚ್ಚಿನ ಜಾಗರೂಕತೆ ಕ್ರಮ
ಜಿಲ್ಲೆಯಲ್ಲಿ ಮೂರು ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿರುವುದರಿಂದ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾವು
ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ. ನನ್ನ ಮತ್ತು ಶಾಸಕರ ಮನವಿ ಮೇರೆಗೆ ಸಾಮಾಜಿಕ ಕಳಕಳಿಯ ಬದ್ಧತೆಯಿಂದ ಮಾಹೆ ಆಡಳಿತ ಈ ನಿರ್ಧಾರ ತಳೆದಿದೆ. ಇದು ಅಭಿನಂದನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ರೋಗಿಗಳಿಗೆ ಸೀಮಿತ
ಸೋಂಕಿತರೊಂದಿಗೆ ಸಂಪರ್ಕವಿದ್ದ ಸೂಕ್ಷ್ಮ ವ್ಯಕ್ತಿಗಳನ್ನು ಉದ್ಯಾವರ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಿದ್ದೇವೆ. ಅಲ್ಲಿ 150 ಬೆಡ್‌ಗಳಿವೆ. ಉಡುಪಿ, ಕುಂದಾಪುರ, ಕಾರ್ಕಳ ಸರಕಾರಿ ಆಸ್ಪತ್ರೆಗಳಲ್ಲಿ ತಲಾ 20 ಬೆಡ್‌ಗಳಿವೆ. ಕಡಿಮೆ ಸಮಸ್ಯೆ ಇರುವವರನ್ನು ಹಾಸ್ಟೆಲ್‌ಗ‌ಳಲ್ಲಿ ಇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಸೋಂಕು ದೃಢಪಟ್ಟ ರೋಗಿಗಳನ್ನು ಡಾ| ಟಿಎಂಎ ಪೈ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುವುದು. ಇದು ಉಡುಪಿ ಜಿಲ್ಲೆಯ ಸೋಂಕಿತ ರೋಗಿಗಳಿಗೆ ಮಾತ್ರ ಅನ್ವಯ. ಹೊರ ಜಿಲ್ಲೆಗಳ ರೋಗಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

Advertisement

ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಈಗ ಎಂಟು ವೆಂಟಿಲೇಟರ್‌ಗಳಿದ್ದು ಇನ್ನೂ ಮೂರನ್ನು ಅಳವಡಿಸುತ್ತೇವೆ ಎಂದು ಡಾ| ಅವಿನಾಶ ಶೆಟ್ಟಿ ತಿಳಿಸಿದರೆ, ಜಿಲ್ಲೆಯ ಖಾಸಗಿ ವಲಯದಲ್ಲಿ 26 ಮತ್ತು ಸರಕಾರಿ ವಲಯದಲ್ಲಿ 9
ವೆಂಟಿಲೇಟರ್‌ಗಳಿವೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ಸುಧೀರ್‌ಚಂದ್ರ ಸೂಡ ಅವರು ತಿಳಿಸಿದರು. ಇನ್ನೂ 10 ವೆಂಟಿಲೇಟರ್‌ಗಳನ್ನು ಉಡುಪಿ ಜಿಲ್ಲೆಗೆ ಮಂಜೂರು ಮಾಡಲು ಸರಕಾರಕ್ಕೆ ವಿನಂತಿಸಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಫೀವರ್‌ ಕ್ಲಿನಿಕ್‌
ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಫೀವರ್‌ ಕ್ಲಿನಿಕ್‌ಗಳನ್ನು ತೆರೆಯಲಿದ್ದೇವೆ. ಇಲ್ಲಿ ಜ್ವರ, ಶೀತ ಬಾಧೆ ಇದ್ದವರು ತಪಾಸಣೆ ಮಾಡಿಸಿಕೊಳ್ಳಬಹುದು. ಅವರಿಗೆ ಮುಂದಿನ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಲಾಗು ವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಡಾ|  ಟಿಎಂಎ ಪೈ ಆಸ್ಪತ್ರೆಯಲ್ಲಿಯೂ ಫೀವರ್‌ ಕ್ಲಿನಿಕ್‌ ತೆರೆಯಲಾಗುವುದು ಎಂದು ಡಾ| ಬಲ್ಲಾಳ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್‌ಪಿ ವಿಷ್ಣುವರ್ಧನ್‌ ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಉಪಸ್ಥಿತರಿದ್ದರು.

ರಾಜ್ಯಕ್ಕೆ ಮಾದರಿ
ಇಡೀ ರಾಜ್ಯದಲ್ಲಿ ಹೀಗೆ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯೊಂದನ್ನು ಪ್ರತ್ಯೇಕ ಕೋವಿಡ್‌ 19 ಆಸ್ಪತ್ರೆಯಾಗಿ ಮಾರ್ಪಡಿಸಿರುವ ಬೇರೆ ಉದಾಹರಣೆಗಳಿಲ್ಲ. ಇದೊಂದು ಮೇಲ್ಪಂಕ್ತಿ. ಇದೇ ರೀತಿ ಎಲ್ಲ ಜಿಲ್ಲೆಗಳಲ್ಲಿರುವ ವೈದ್ಯಕೀಯ ಕಾಲೇಜುಗಳು ಸಾಮಾಜಿಕ ಕಳಕಳಿಯನ್ನು ತೋರಿಸಬೇಕು. ಇದು ಸರಕಾರದ ಜತೆ ಮಾಡಿಕೊಂಡ ಒಪ್ಪಂದವಲ್ಲ, ವೈದ್ಯಕೀಯ ವೆಚ್ಚ ಸರಕಾರದಿಂದ ರೀಇಂಬರ್ಮೆಂಟ್‌ ಕೂಡ ಇಲ್ಲ. ಇದರ ಸಂಪೂರ್ಣ ವೆಚ್ಚವನ್ನು ಮಾಹೆ ಭರಿಸುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

ಕೋವಿಡ್  19 ಸೋಂಕು ತಡೆಗಟ್ಟಲು ಜಿಲ್ಲಾಧಿಕಾರಿ ಮತ್ತು ಶಾಸಕರು ಮಾಡಿದ ಮನವಿ ಮೇರೆಗೆ ಈ ನಿರ್ಧಾರ ತಳೆಯಲಾಗಿದೆ.
ಎ. 1ರಿಂದ ಈ ಆಸ್ಪತ್ರೆ ಕೋವಿಡ್‌ ಮೀಸಲು ಆಸ್ಪತ್ರೆಯಾಗಿ ಕಾರ್ಯಾಚರಿಸ
ಲಾಗುವುದು.
– ಡಾ| ಎಚ್‌.ಎಸ್‌. ಬಲ್ಲಾಳ್‌

Advertisement

Udayavani is now on Telegram. Click here to join our channel and stay updated with the latest news.

Next