Advertisement

ತಿವಾರಿ ಸಾವಿನ ಸಾಕ್ಷ್ಯ ನಾಶಕ್ಕೆ ಯತ್ನ

11:42 AM Sep 27, 2017 | Team Udayavani |

ಬೆಂಗಳೂರು: ಉತ್ತರಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ನಾಶಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಮೇ 17ರಂದು ಅನುರಾಗ್‌ ತಿವಾರಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ ಆಹಾರ ಇಲಾಖೆ ಅಧಿಕಾರಿಗಳ ತಂಡವೊಂದು ಸಂಜಯ್‌ನಗರದಲ್ಲಿದ್ದ ತಿವಾರಿ ನಿವಾಸಕ್ಕೆ ತೆರಳಿ ಅಲ್ಮೇರಾ ಒಡೆದು ಕೆಲ ಪ್ರಮುಖ ದಾಖಲೆ ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿದೆ.

ಅನುರಾಗ್‌ ತಿವಾರಿ ಸಾವಿಗೆ ಸಂಬಂಧಿಸಿದ ಕೆಲ ಸಾಕ್ಷ್ಯಗಳನ್ನು ನಾಶಪಡಿಸುವ ಸಲುವಾಗಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಅನುರಾಗ್‌ ತಿವಾರಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್‌ ತಿವಾರಿ ನಿಗೂಢ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ಆಗಸ್ಟ್‌ 29ರಂದು ದಾಖಲೆಗಳ ಸಂಗ್ರಹಕ್ಕಾಗಿ ತಿವಾರಿ ವಾಸವಿದ್ದ ಸಂಜಯ್‌ನಗರದ ನಿವಾಸಕ್ಕೆ ಭೇಟಿಕೊಟ್ಟಿತ್ತು.

ಈ ವೇಳೆ ತಿವಾರಿ ತಂದೆ ಹಾಗೂ ತಾಯಿಯನ್ನು ಕರೆದುಕೊಂಡು ಬಂದಿದ್ದು, ಮನೆಯ ಬೀಗ ತೆರೆದು ನೋಡಿದಾಗ ಕಬ್ಬಿಣದ ಅಲ್ಮೇರಾ ಒಡೆದು ಅದರಲ್ಲಿದ್ದ ಪ್ರಮುಖ ದಾಖಲೆಗಳು ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿರುವ ಸಂಗತಿ ಗೊತ್ತಾಗಿದೆ.

ಸಾಕ್ಷ್ಯಾ ನಾಶಪಡಿಸುವ ಸಲುವಾಗಿ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಮೇ 11ರಿಂದ 22ರ ನಡುವಣ ಅವಧಿಯಲ್ಲಿ ಈ ಕೃತ್ಯ ಎಸಗಿದೆ ಎಂದು ಆರೋಪಿಸಿರುವ ತಿವಾರಿ ತಂದೆ ಬಿ.ಎನ್‌ ತಿವಾರಿ ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಆಗಸ್ಟ್‌ 30ರಂದು ಸಂಜಯ್‌ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಸಹೋದರ ತಿವಾರಿ ಜೊತೆಯಲ್ಲಿ ನಮ್ಮ ತಾಯಿ ಕೂಡ ವಾಸವಿದ್ದರು. ಅಲ್ಮೇರಾ ಕೀಗಳನ್ನು ಆಕೆಯಿಟ್ಟುಕೊಂಡಿದ್ದಳು. ಆಗಸ್ಟ್‌ 29ರಂದು ಸಿಬಿಐ ಅಧಿಕಾರಿಗಳ ಜೊತೆ ಆಕೆ ಬಂದಾಗ, ಅಲ್ಮೇರಾ ಒಡೆದು ಹಾಕಿರುವ ಸಂಗತಿ ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಆಕೆಯ ಚಿನ್ನದ ಬಳೆಗಳನ್ನು  ಕದ್ದೊಯ್ದಿದ್ದಾರೆ.

ಸಿಬಿಐ ತನಿಖೆಯ ದಿಕ್ಕು ತಪ್ಪಿಸುವುದು ಹಾಗೂ ಸಾವಿಗೆ ಸಂಬಂಧಿಸಿದ ಸಾಕ್ಷ್ಯಾಗಳನ್ನು ನಾಶಪಡಿಸುವ ಸಲುವಾಗಿ ಮನೆ ಕ್ಲೀನ್‌ ಮಾಡುವ ನೆಪದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿವಾರಿ ಸಹೋದರ ಅಲೋಕ್‌ ತಿವಾರಿ  ದೂರಿದ್ದಾರೆ. 

ಕ್ರಮ ಕೈಗೊಳ್ಳದ ಪೊಲೀಸರು: ತಮ್ಮ ಪುತ್ರ ಅನುರಾಗ್‌ ತಿವಾರಿ ನಿವಾಸದಲ್ಲಿ ದಾಖಲೆಗಳನ್ನು ಹಾಗೂ ಚಿನ್ನಾಭರಣ ತೆಗೆದುಕೊಂಡು ಹೋಗಿರುವ ಅಧಿಕಾರಿ ಶಾಂತಲಾ ಹೆಸರು ಉಲ್ಲೇಖೀಸಿ ದೂರು ನೀಡಲಾಗಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದುವರೆಗೂ ಎಫ್ಐಆರ್‌ ದಾಖಲಿಸಿಕೊಳ್ಳದೇ ವಿಳಂಬ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣದ ತನಿಖೆಯ ದಿಕ್ಕುತಪ್ಪಿಸಲೇಂದೇ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿ ಅನುರಾಗ್‌ ತಿವಾರಿ ಕುಟುಂಬಸ್ಥರು ನೀಡಿರುವ ದೂರಿನ ವಿಚಾರ ಗಮನಕ್ಕೆ ಬಂದಿದೆ. ಈ ಸಂಬಂಧ ದಾಖಲಾಗಿರುವ ದೂರಿನ ಅನ್ವಯ ಪೊಲೀಸರ ತನಿಖೆಗೆ ಇಲಾಖೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ. ಘಟನೆ ನಡೆದು ಐದು ತಿಂಗಳ ಬಳಿಕ ಈ ಆರೋಪ ಕೇಳಿಬಂದಿರುವುದು ಅಚ್ಚರಿ ತರಿಸಿದೆ. 
-ಯು.ಟಿ ಖಾದರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next