ಕೋಲ್ಕತ್ತಾ: ತೆಲುಗು ಟೈಟಾನ್ಸ್‌ನ ಆಟಗಾರರನ್ನು ಪ್ರತಿ ಹಂತದಲ್ಲೂ ಕೋರ್ಟಿನಿಂದ ತೊಲಗುವಂತೆ ಮಾಡಿದ ಪುನೇರಿ ಪಲ್ಟಾನ್ 42-37 ರಿಂದ ಸುಲಭ ಜಯ ದಾಖಲಿಸಿತು. ಆರಂಭದಲ್ಲಿ ಆಟ ಮರೆತಂತೆ ಆಡಿದ ಟೈಟಾನ್ಸ್, ಕೊನೆಯ ಹಂತದಲ್ಲಿ ಫೀನಿಕ್ಸ್ನಂತೆ ಏಳುವ ಹೊತ್ತಿಗೆ, ವಿಜಯಲಕ್ಷ್ಮೀಯ ಮಾಲೆ ಪುನೇರಿಯ ಕೊರಳಿಗೆ ಬಿದ್ದಿತ್ತು!
ಇಲ್ಲಿನ ನೇತಾಜಿ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಪುನೇರಿ ಪಲ್ಟಾನ್‌ನ ಮುಂದೆ ಅಸಹಾಯಕವಾಗಿ ನಿಂತಂತಿದ್ದ ಟೈಟಾನ್ಸ್, ಖಾತೆ ತೆರೆದಿದ್ದೇ 10ನೇ ನಿಮಿಷದಲ್ಲಿ! ಅಷ್ಟರಲ್ಲಾಗಲೇ ಪುನೇರಿ 18 ಅಂಕಗಳಿಂದ ಎಷ್ಟೋ ದೂರ ಮುಂದೆ ಹೋಗಿತ್ತು. ಕೊನೆಯ ಹಂತದಲ್ಲಿ ಮೈಚಳಿ ಬಿಟ್ಟು
ಆಡಿದರೂ, ಅದು ಪ್ರಯೋಜನವಾಗಲಿಲ್ಲ.
ಟೈಟಾನ್ಸ್‌ಗೆ ಆರಂಭದ ವಿಘ್ನ: ರಾಹುಲ್ ಚೌಧರಿಯಂಥ ಸ್ಟಾರ್ ರೈಡರ್‌ನನ್ನು ಇಟ್ಟುಕೊಂಡೂ ಟೈಟಾನ್ 6ನೇ ನಿಮಿಷದಲ್ಲಿ ಮೊದಲ ಬಾರಿಗೆ ಆಲ್‌ಔಟ್ ಆಯಿತು. ಪುಣೇರಿ ಕಪ್ತಾನ ದೀಪಕ್ ಹೂಡಾರ ತಣ್ಣನೆಯ ಆಕ್ರಮಣಕ್ಕೆ ಬೆಚ್ಚಿದ ಟೈಟಾನ್ಸ್, ಕೋಟೆ ರಕ್ಷಿಸಿಕೊಳ್ಳುವಲ್ಲೂ ತಾನು ದುರ್ಬಲ ಅಂತ ತೋರಿಸಿಕೊಟ್ಟಿತು. ಮೊದಲಾರ್ಧ ಮುಗಿಯುವ ಹೊತ್ತಿಗೆ ಪುನೇರಿ 26-12 ರಿಂದ ಮುಂದಿತ್ತು.
ದ್ವಿತೀಯಾರ್ಧದಲ್ಲಿ ಟ್ವಿಸ್ಟ್: ಪುನೇರಿಯ ಪಟ್ಟುಗಳಿಗೆ ಕಂಗಾಲಾಗಿ ಹೋಗಿದ್ದ, ಟೈಟಾನ್ಸ್ ದ್ವಿತೀಯಾರ್ಧದಲ್ಲಿ ಮೈಕೊಡವಿ ಮೇಲೇಳಲು ಯತ್ನಿಸಿತು. ರಾಹುಲ್ ಚೌಧರಿ ತಮ್ಮ ನೈಜ ಪ್ರದರ್ಶನ ನೀಡಿದಾಗ, ಟೈಟಾನ್ಸ್ ಕೊಂಚ ನಿಟ್ಟುಸಿರು ಬಿಟ್ಟಿತು. 35ನೇ ನಿಮಿಷದಲ್ಲಿ ರಾಹುಲ್ ತಂದ 3 ಸೂಪರ್ ರೈಡಿಂಗ್ ಪಾಯಿಂಟ್, ಅದರ ಬೆನ್ನಲ್ಲೇ ಪುಣೆ ಆಲ್‌ಔಟ್ ಆಗಿ ಟೈಟಾನ್ಸ್‌ನ ಅಂಕ ಹೆಚ್ಚಿಸಿದವು. ಟೈಟಾನ್ಸ್ ಅನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದ ದೀಪಕ್ ಹೂಡಾ ಆರಾಮಾಗಿ, ಅಂಕಗಳನ್ನು ತಂಡದ ಖಾತೆಗೆ ಸೇರಿಸುತ್ತಿದ್ದರು. ದೀಪಕ್ ಹೂಡಾ 20 ರೈಡಿಂಗ್‌ನಿಂದ 9 ಅಂಕಗಳನ್ನು ಪಡೆದರು. ಟೈಟಾನ್ಸ್‌ನ ರಾಹುಲ್ ಕೂಡ ಕೊನೆಯ ಕ್ಷಣದಲ್ಲಿ 9 ಪಾಯಿಂಟ್ ಕಲೆಹಾಕಿ, ಕದನ ಕುತೂಹಲ ಹೆಚ್ಚಿಸಿದರು.
ಇನ್ನೇನು ಆಟ ಮುಗಿಯಲು 1 ನಿಮಿಷ ಇದೆಯೆನ್ನುವಾಗ, ರಾಹುಲ್ ಅನ್ನು ಬಲೆಗೆ ಬೀಳಿಸಿದ ಪುನೇರಿ, ಅದರೊಂದಿಗೆ ತನ್ನ ಕೋಟೆಯನ್ನೂ ರಕ್ಷಿಸಿಕೊಂಡು, ಆಲ್‌ಔಟ್ ಅಪಾಯದಿಂದ ಹೊರಬಂತು. ಪುನೇರಿ ಪರವಾಗಿ ಗಿರೀಶ್ ಮಾರುತಿ ಎರ್ನಾಕ್ 6 ಟ್ಯಾಕಲ್ ಪಾಯಿಂಟ್ ಕಲೆಹಾಕಿ, ಅತ್ಯುತ್ತಮ ಡಿಫೆಂಡರ್ ಖ್ಯಾತಿಗೆ ಪಾತ್ರರಾದರು.
ಬೆಂಗಾಲ್-ಡೆಲ್ಲಿ ಪಂದ್ಯ ಟೈ: ತವರಿನ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ಪ್ರಬಲ ಹೋರಾಟ ನಡೆಸಿದರೂ ಅಂತಿಮವಾಗಿ ದಬಾಂಗ್ ಡೆಲ್ಲಿ ವಿರುದ್ಧ 31-31 ಅಂಕಗಳಿಂದ ಟೈಗೊಳಿಸಲಷ್ಟೇ ಶಕ್ತವಾಯಿತು.
ಕೀರ್ತಿ ಕೊಲ್ಗಾರ್