ಹೈದರಾಬಾದ್/ನವದೆಹಲಿ: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಪತ್ತೆಯಾಗಿರುವ ವಿಚಾರ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದು, ಏತನ್ಮಧ್ಯೆ ತಿರುಮಲ ತಿರುಪತಿ ದೇವಸ್ಥಾನಂ(TTD) ಸೋಮವಾರ (ಸೆ.23) ದೇವರ ಸನ್ನಿಧಿಯಲ್ಲಿ ಶಾಂತಿ ಹೋಮ ನಡೆಸುವ ಮೂಲಕ ಶುದ್ಧೀಕರಣಕ್ಕೆ ಮುಂದಾಗಿದೆ.
ಪ್ರಧಾನ ಅರ್ಚಕ ರಾಮಕೃಷ್ಣ ದೀಕ್ಷಿತ್ ಈ ಬಗ್ಗೆ ಟಿವಿ9 ಜತೆ ಮಾತನಾಡಿದ್ದು, ಪ್ರಸಾದ ಸ್ವೀಕರಿಸಿದ ಭಕ್ತರು ಯಾವುದೇ ಕಾರಣಕ್ಕೂ ಆತಂಕಪಡುವುದು ಬೇಡ. ಶಾಂತಿ ಹೋಮ ಮೂಲಕ ಪರಿಹಾರ ನೀಡಿದ್ದೇವೆ. ಭಕ್ತರು ಅಂಜಿಕೆ ಇಲ್ಲದೇ ಪ್ರಸಾದ ಸೇವಿಸಬಹುದು ಎಂದು ದೀಕ್ಷಿತ್ ಹೇಳಿದರು.
ದೀಕ್ಷಿತ್ ಅವರ ನೇತೃತ್ವದಲ್ಲಿ ನಡೆದ ಮಹಾ ಶಾಂತಿ ಹೋಮದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಹಾಗೂ ಇತರ ಅಧಿಕಾರಿಗಳು, ಪುರೋಹಿತರು ಪಾಲ್ಗೊಂಡಿದ್ದರು.
ದೇವಾಲಯದ ಆವರಣದಲ್ಲಿ ಮೂರು ಹೋಮ ಕುಂಡ ನಿರ್ಮಿಸಿ, ಶಾಂತಿ ಹೋಮ ನಡೆಸುವ ಮೂಲಕ ದೇವಾಲಯವನ್ನು ಶುದ್ದಿಗೊಳಿಸಲಾಯಿತು ಎಂದು ವರದಿ ವಿವರಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಲಹೆಯಂತೆ, ಆಗಮ ತಜ್ಞ ಜೇಯಂಗಾರ್ ಅವರನ್ನು ಸಂಪರ್ಕಿಸಿ, ಅವರ ಅಣತಿಯಂತೆ ಶಾಂತಿ ಹೋಮ ನಡೆಸಲು ತೀರ್ಮಾನಿಸಲಾಗಿತ್ತು ಎಂದು ವರದಿ ತಿಳಿಸಿದೆ.