Advertisement

ತಿರುಪತಿಗೆ ಮತ್ತೆ ಪ್ರವಾಹ ಭೀತಿ; ಹಳೆಯದಾದ “ರಾಯಲ ಚೆರುವು’ಅಣೆಕಟ್ಟಿನಲ್ಲಿ ಬಿರುಕು

09:29 PM Nov 21, 2021 | Team Udayavani |

ತಿರುಪತಿ: ಮಳೆ ಹಾವಳಿ, ಪ್ರವಾಹದಿಂದ ತತ್ತರಿಸಿದ್ದ ದೇಗುಲ ನಗರಿ ತಿರುಪತಿಯ ಜನತೆಗೆ ಹೊಸತೊಂದು ಭೀತಿ ಕಾಡಲಾರಂಭಿಸಿದೆ.

Advertisement

ಜಿಲ್ಲೆಯಲ್ಲಿರುವ, ಆಂಧ್ರಪ್ರದೇಶದ ಅತಿ ಹಳೆಯ ಹಾಗೂ ಅತಿ ದೊಡ್ಡ ಜಲಾಶಯಗಳಲ್ಲೊಂದಾದ “ರಾಯಲ ಚೆರವು’ನ ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲಿನ ನೀರು ಸೋರಿಕೆಯಾಗುತ್ತಿದ್ದು, ಅಣೆಕಟ್ಟು ಒಡೆದರೆ ಸುತ್ತಮುತ್ತಲಿನ ಹಳ್ಳಿಗಳು ಸೇರಿ ಅಪಾರ ಪ್ರಾಂತ್ಯ ಮುಳುಗಡೆಯಾಗುವ ಭೀತಿ ಆವರಿಸಿದೆ.

ಜಿಲ್ಲಾಧಿಕಾರಿ ಹರಿ ನಾರಾಯಣ್‌, ಜಿಲ್ಲಾ ಪೊಲೀಸರು, ಕಂದಾಯ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು, ತಜ್ಞರು, ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ, “ರಾಯಲ ಚೆರವು ಅಣೆಕಟ್ಟು ಒಡೆಯುವ ಭೀತಿ ಆವರಿಸಿದೆ. ಹಾಗಾಗಿ, ಅಣೆಕಟ್ಟಿನ ಸುತ್ತಲಿನ ಜನರು, ತಮ್ಮ ಅವಶ್ಯಕ ವಸ್ತುಗಳನ್ನು, ದಾಖಲೆಗಳನ್ನು ತೆಗೆದುಕೊಂಡು ಎತ್ತರದ ಸ್ಥಳಗಳಿಗೆ ಹೊರಡಬೇಕು’ ಎಂದು ಜಿಲ್ಲಾಡಳಿತ ಸೂಚನೆ ರವಾನಿಸಿದೆ.

ಇದನ್ನೂ ಓದಿ:ಕಮಲಾ ಪಸಂದ್‌ ಸಂಸ್ಥೆಗೆ ನೋಟಿಸ್‌ ಕಳಿಸಿದ ಬಿಗ್‌ಬಿ

Advertisement

ಸಾವಿನ ಸಂಖ್ಯೆ 31ಕ್ಕೇರಿಕೆ:
ಆಂಧ್ರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ, ಕೊಂಚ ಇಳಿಮುಖವಾಗಿದೆ. ಮಳೆಯಿಂದಾಗಿ ಕೊಚ್ಚಿ ಹೋಗಿದ್ದ ಕೆಲವರ ಮೃತದೇಹಗಳು ಭಾನುವಾರ ಪತ್ತೆಯಾಗಿದ್ದು ಅಲ್ಲಿಗೆ ಮಳೆಯಿಂದಾಗಿ ಸಾವಿಗೀಡಾದವರ ಸಂಖ್ಯೆ 31ಕ್ಕೇರಿದೆ. ಈ ನಡುವೆ, ತಿರುಪತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸುಮಾರು 4 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.

ಮಳೆಯಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ಆಶ್ರಯ ನೀಡಿ, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಈರುಳ್ಳಿ, ಆಲೂಗೆಡ್ಡೆಗಳನ್ನು ಉಚಿತವಾಗಿ ವಿತರಿಸಲು ಆಂಧ್ರಪ್ರದೇಶ ನಿರ್ಧರಿಸಿದೆ.

ಮತ್ತೊಂದೆಡೆ, ತೆಲಂಗಾಣದಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣದಿಂದ ಬಿರುಸಿನ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next