Advertisement

ತಿರುಪತಿಗೂ ಕೋವಿಡ್ ನಷ್ಟ ; ಆರ್ಥಿಕ ಬಿಕ್ಕಟ್ಟು ಎದುರಿಸಲು ಟಿಟಿಡಿ ಚಿಂತನೆ

09:41 AM May 13, 2020 | Hari Prasad |

ತಿರುಪತಿ/ತಿರುವನಂತಪುರ: ಜಗತ್ತಿನ ಅತೀ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನನ್ನೂ ಕೋವಿಡ್, ಆರ್ಥಿಕ ನಷ್ಟದಿಂದ ತಬ್ಬಿಬ್ಬು ಮಾಡಿದೆ.

Advertisement

ಲಾಕ್‌ಡೌನ್‌ ಪರಿಣಾಮ ದೇಗುಲ ಬಂದ್‌ ಆಗಿದ್ದರಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈಗ ಸಿಬಂದಿಗೆ ಸಂಬಳ ನೀಡಲೂ ಪರದಾಡುತ್ತಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಟಿಟಿಡಿ ಸುಮಾರು 300 ಕೋಟಿ ರೂ.ಗಳನ್ನು ಸಂಬಳ, ಪಿಂಚಣಿ ಮತ್ತು ಇತರ ದೈನಂದಿನ ಕೆಲಸಗಳಿಗೆ ಖರ್ಚು ಮಾಡಿದೆ.

ದೇಗುಲದ ಹೆಸರಿನಲ್ಲಿರುವ 8 ಟನ್‌ ಚಿನ್ನ, 14 ಸಾವಿರ ಕೋಟಿ ರೂ. ಸ್ಥಿರ ಠೇವಣಿಯನ್ನು ಮುಟ್ಟದೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಕುರಿತು ಟಿಟಿಡಿ ಸಮಾಲೋಚಿಸುತ್ತಿದೆ.

ಒಂದು ಪೈಸೆ ಆದಾಯವಿಲ್ಲ: ‘ಸಾಮಾನ್ಯ ದಿನಗಳಲ್ಲಿ ತಿರುಮಲ ದೇಗುಲಕ್ಕೆ ಸರಾಸರಿ 1 ಲಕ್ಷ ಭಕ್ತರು ಆಗಮಿಸುತ್ತಿದ್ದರು. ಮಾಸಿಕ ಆದಾಯ 200- 220 ಕೋಟಿ ರೂ. ಮುಟ್ಟುತ್ತಿತ್ತು.

Advertisement

50 ದಿನಗಳಿಂದ ದೇಗುಲದ ಬಾಗಿಲು ತೆಗೆಯದ ಕಾರಣ, ಒಂದು ಪೈಸೆ ಆದಾಯವೂ ಕಾಣಲಾಗಲಿಲ್ಲ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬರೆಡ್ಡಿ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ತಿರುಮಲ ದೇಗುಲ ಸಾರ್ವಜನಿಕರಿಗೆ ಎಂದು ತೆರೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.

ಅಯ್ಯಪ್ಪನಿಗೂ 200 ಕೋಟಿ ರೂ. ನಷ್ಟ
ಹತ್ತಿರ ಹತ್ತಿರ ಎರಡು ತಿಂಗಳ ಲಾಕ್‌ಡೌನ್‌ ಕೇವಲ ಉದ್ಯಮಿಗಳು, ಸಾಮಾನ್ಯ ವರ್ಗದವರಿಗಷ್ಟೇ ಹೊಡೆತ ನೀಡಿಲ್ಲ.

ಲಕ್ಷಾಂತರ ಭಕ್ತರನ್ನು ಕಾಣುತ್ತಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೂ 200 ಕೋಟಿ ರೂ. ಆದಾಯ ಕೊರತೆಯಾಗಿದೆ. ಕೇವಲ ಶಬರಿಮಲೆ ಮಾತ್ರವಲ್ಲ, ‘ದೇವರನಾಡು’ ಕೇರಳದ ಅಂದಾಜು 1300 ದೇಗುಲಗಳ ಆದಾಯ ಕುಸಿದಿದೆ.

‘ಶಬರಿಮಲೆಯಲ್ಲಿ ಎರಡು ತಿಂಗಳಿಂದ ಭಕ್ತರಿಗೆ ದರ್ಶನ ನಿಂತಿದೆ. ಅದ್ಧೂರಿಯಾಗಿ ನಡೆಯಬೇಕಿದ್ದ ಜಾತ್ರೆಯೂ ಮುಂದೂಡಲ್ಪಟ್ಟಿದೆ. ಅಯ್ಯಪ್ಪ ಸನ್ನಿಧಾನವೂ ಸೇರಿ ಕೇರಳದ 1300 ದೇಗುಲಗಳಲ್ಲಿ 5 ಸಾವಿರ ಅರ್ಚಕ ಸಿಬಂದಿಗೆ ಸಂಬಳ, 4 ಸಾವಿರ ಮಂದಿಗೆ ಪಿಂಚಣಿ ನೀಡಬೇಕು. ಇದಕ್ಕೆ ಮಾಸಿಕವಾಗಿ 40 ಕೋಟಿ ರೂ. ವೆಚ್ಚವಾಗುತ್ತಿದೆ’ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್‌ ಆತಂಕ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next