Advertisement

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

05:55 PM Dec 16, 2024 | Team Udayavani |

ಹೈದರಾಬಾದ್:‌ ಇನ್ಮುಂದೆ ತಿರುಮಲ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಹೌದು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಈಗ ಹಲವು ಗಂಟೆಗಳ ಕಾಲ ಭಕ್ತರು ಕಾಯಬೇಕಾಗಿದೆ. ಆದರೆ ಇದೀಗ ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ Facial Recognition (ಮುಖದ ಗುರುತು ಪತ್ತೆ) ತಂತ್ರಜ್ಞಾನ ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದ್ದು, ಇದರಿಂದಾಗಿ ಭಕ್ತರಿಗೆ ಶೀಘ್ರವೇ ತಿಮ್ಮಪ್ಪನ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಈ ವಿಷಯದ ಕುರಿತು  ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ನ ಬಿಎಸ್‌ ಎನ್‌ ಮಲ್ಲೇಶ್ವರ ರಾವ್‌ ಅವರ  ಎಕ್ಸ್‌ ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿರುವ ಟಿಟಿಡಿ ಅಧ್ಯಕ್ಷ ಬಿ.ಆರ್.‌ ನಾಯ್ಡು ಅವರು ಇನ್ನು ಆರು ತಿಂಗಳೊಳಗೆ ಎಐ ಪವರ್ಡ್‌ ಸಿಸ್ಟಮ್‌ ಅನುಷ್ಠಾನಕ್ಕೆ ಬರಲಿದೆ ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಒಂದು ಬಾರಿ ಈ ನೂತನ ಎಐ ವ್ಯವಸ್ಥೆ ಅನುಷ್ಠಾನಗೊಂಡಲ್ಲಿ ಸಾಮಾನ್ಯ ಭಕ್ತರೂ ಕೂಡಾ ಕೇವಲ ಒಂದು ಗಂಟೆಯೊಳಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ ಎಂದು ನಾಯ್ಡು ಅವರು ತಿಳಿಸಿದ್ದಾರೆ.

ತಿರುಮಲ ಮತ್ತು ತಿರುಪತಿಯಲ್ಲಿ ಈಗಾಗಲೇ ಬೆಂಗಳೂರು ಮೂಲದ ಕಂಪನಿಯೊಂದು ಈ ಮಹತ್ವದ ಯೋಜನೆಯ ತಯಾರಿಯಲ್ಲಿ ತೊಡಗಿರುವುದಾಗಿ ನಾಯ್ಡು ಅವರು ತಿಳಿಸಿದ್ದು, ಇದರೊಂದಿಗೆ ತಿರುಮಲವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಪರಿವರ್ತಿಸುವ ಕನಸು ಹೊಂದಿರುವುದಾಗಿ ಹೇಳಿದ್ದಾರೆ.

Advertisement

ತಿರುಮಲದ ಪುರಾತನ ವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕೈಗೊಳ್ಳಲು ಬೇಕಾದ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್‌ ಕಲ್ಯಾಣ್‌ ಅವರು ಪೂರ್ಣಪ್ರಮಾಣದಲ್ಲಿ ಬೆನ್ನೆಲುಬಾಗಿ ನಿಂತಿರುವುದಾಗಿ ಬಿಆರ್‌ ನಾಯ್ಡು ತಿಳಿಸಿದ್ದಾರೆ.

ಪ್ರತಿಯೊಬ್ಬ ಭಕ್ತರೂ ಭಗವಾನ್‌ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಒಂದು ಗಂಟೆಯೊಳಗೆ ಪಡೆಯುವಂತಾಗಬೇಕು ಎಂಬುದು ನಮ್ಮ ಮಹತ್ವದ ಗುರಿಯಾಗಿದೆ. ಇದನ್ನು ನಾವು ಸಾಧಿಸುತ್ತೇವೆ. ವಿಮಾನ ನಿಲ್ದಾಣದಲ್ಲಿ ಉಪಯೋಗಿಸಲ್ಪಡುವ ಡಿಜಿ ಯಾತ್ರಾ ವ್ಯವಸ್ಥೆಯ ತಂತ್ರಜ್ಞಾನದಿಂದ ಪ್ರಭಾವಿತರಾಗಿ ನಾವು ಎಐ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಹೀಗೆ ಎಐ ತಂತ್ರಜ್ಞಾನ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಅಲಿಪಿರಿ ಸೇರಿದಂತೆ ನಿಗದಿಪಡಿಸಿದ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖಗಳನ್ನು ಸ್ಕ್ಯಾನ್‌ ಮಾಡುತ್ತದೆ. ಅದು ದರ್ಶನದ ಕರಾರುವಕ್ ಸಮಯವನ್ನು ನಿಗದಿಪಡಿಸಲಿದ್ದು, ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಕೇವಲ ಒಂದು ಗಂಟೆಯೊಳಗೆ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ ಎಂದು ನಾಯ್ದು ಅವರು ಸಂದರ್ಶನದಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next