ತಿ.ನರಸೀಪುರ: ಗದ್ದೆಯಲ್ಲಿ ಬೆಳೆಗೆ ಔಷಧಿ ಹೊಡೆಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ನಿಲ್ಸೊಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಚಯ್ಯ (60), ಅವರ ಪುತ್ರ ಹರೀಶ್ (39) ಹಾಗೂ ಶಿವಯ್ಯ ಎಂಬುವರ ಪುತ್ರ ಮಹದೇವಸ್ವಾಮಿ (40) ಮೃತರು.
ಭಾನುವಾರ ಗ್ರಾಮದ ಸಮೀಪದ ತಮ್ಮ ಜಮೀನಿನಲ್ಲಿ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದರು. ಜಮೀನಿನ ಒಂದು ಪಾತಿಯಲ್ಲಿ ವಿದ್ಯುತ್ ಕಂಬದಿಂದ ಹಾದು ಹೋಗಿದ್ದ ತಂತಿ ತುಂಡಾಗಿ ಕೆಳಗ್ಗೆ ಬಿದ್ದಿದೆ. ಔಷಧಿ ಸಿಂಪಡಿಸಿಕೊಂಡು ಹೋಗುವಾಗ ಬೆಳೆಯ ಮಧ್ಯದಲ್ಲಿ ತಂತಿ ಬಿದ್ದಿದ್ದು ಆಕಸ್ಮಿಕವಾಗಿ ಹರೀಶ್, ರಾಚಯ್ಯ ಹಾಗೂ ಮಹದೇವಸ್ವಾಮಿ ತುಳಿದು ಮೃತಪಟ್ಟಿದ್ದಾರೆ.
ಘಟನೆಗೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕಾಲ ಕಾಲಕ್ಕೆ ಕಂಬಗಳನ್ನು ಪರಿಶೀಲಿಸುವುದಿಲ್ಲ. ಇಂತಹ ಉದಾಸೀನತೆಯೇ ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಸ್ಥಳಕ್ಕೆ ಶಾಸಕ ಅಶ್ವಿನ್ ಕುಮಾರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಗ್ರಾಮಸ್ಥರು ತಲಾ 10 ಲಕ್ಷ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದು, ಸೆಸ್ಕ್ ಅಧಿಕಾರಿಗಳು 5 ಲಕ್ಷ ಪರಿಹಾರದ ಚೆಕ್ ನೀಡಿದರು. ಡಿವೈಎಸ್‌ಪಿ ಗೋವಿಂದರಾಜು ಸೇರಿ ಸ್ಥಳಿಯ ಜನಪ್ರತಿಧಿಗಳು ಭೆಟಿ ನೀಡಿದರು.