Advertisement

ತೀರ್ಥಹಳ್ಳಿಯಲ್ಲಿ ವಾಹನಗಳ ಭರಾಟೆ

06:12 PM May 09, 2020 | Naveen |

ತೀರ್ಥಹಳ್ಳಿ: ತಾಲೂಕಿನಾದ್ಯಂತ ಕೋವಿಡ್ ಲಾಕ್‌ಡೌನ್‌ ಇದ್ದಂತೆ ಕಾಣುತ್ತಿಲ್ಲ. ಪಟ್ಟಣ ಸೇರಿದಂತೆ ಬಹುತೇಕ ಸಣ್ಣ ಹಳ್ಳಿಗಳಲ್ಲೂ ಲಾಕ್‌ಡೌನ್‌ ಭಯ ಕಾಣುತ್ತಿಲ್ಲ. ಬೆಳಗಾದರೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಎಲ್ಲೂ ಕಾಣುತ್ತಿಲ್ಲ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಕೊಂಚ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

Advertisement

ಪಟ್ಟಣದಲ್ಲಿ ಹಿಂದೆ ಇದ್ದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8 ರಿಂದ 2 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿತ್ತು. ಈಗ ಜನರಿಗೆ ತೊಂದರೆಯಾಗದಂತೆ ವ್ಯಾಪಾರದ ಸಮಯ ಬದಲು ಮಾಡಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ವ್ಯಾಪಾರ ಸಮಯ ನಿಗದಿಸಲಾಗಿದೆ. ಕಳೆದ ಐವತ್ತು ದಿನಗಳಿಂದ ಡಿಸಿ, ಎಸ್‌ಪಿ, ತಹಶೀಲ್ದಾರ್‌ ಡಾ. ಶ್ರೀಪಾದ್‌ ದಿನದ ಇಪ್ಪತ್ತನಾಲ್ಕು ಗಂಟೆಯೂ ರಾತ್ರಿ ಹಗಲೆನ್ನದೆ ಜಿಲ್ಲೆ-ತಾಲೂಕಿಗೆ ಕೊರೊನಾ ತಡೆಗೆ ಶ್ರಮಿಸುತ್ತಿದ್ದಾರೆ. ಅದರಂತೆ ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಎಲ್ಲ ಕೊರೊನಾ ವಾರಿಯರ್ಸ್‌ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಜನ ಮಾತ್ರ ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಡುವುದನ್ನು ನಿಲ್ಲಿಸುತ್ತಿಲ್ಲ. ಮದ್ಯ ಮಾರಾಟ ಮತ್ತು ಲಾಕ್‌ಡೌನ್‌ ಸಡಿಲಿಕೆ ಆದಾಗಿನಿಂದ ಪಟ್ಟಣಕ್ಕೆ ಬರುವ ವಾಹನ ಮತ್ತು ಸಂಖ್ಯೆ ವಿಪರೀತ ಹೆಚ್ಚಿದೆ.

ಬಹುತೇಕ ಕಡೆ ಸಾಮಾಜಿಕ ಅಂತರ ಮರೆತೇ ಹೋಗಿದೆ. ಗಡಿ ಚೆಕ್‌ಪೋಸ್ಟ್‌ನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡುತ್ತಿದ್ದರೂ ರಾತ್ರಿಯಾಗುತ್ತಿದ್ದಂತೆ ವಾಹನ ತಪಾಸಣೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ದೂರು ಕೇಳಿ ಸಾರ್ವಜನಿಕರಿಂದ ಬರುತ್ತಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಕಡೆಯಿಂದ ಹತ್ತಾರು ವಾಹನಗಳು ತೀರ್ಥಹಳ್ಳಿ ಮಾರ್ಗದ ಮೇಲೆ ಆಗಮಿಸಿ ಆಗುಂಬೆ ಮೂಲಕ ಕರಾವಳಿ ಪ್ರವೇಶ ಪಡೆದುಕೊಳ್ಳುತ್ತಿವೆ. ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಇತರೆ ಸಾಗಣೆ ಮಾಡಲಾಗುತ್ತದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ವಾಹನ ತಪಾಸಣೆ ಇಲ್ಲ. ಇದು ತೀರ್ಥಹಳ್ಳಿ ಜನತೆಯ ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next