Advertisement

ವರ್ಗಾವಣೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನ

10:41 AM Jan 16, 2019 | |

ಮುದ್ದೇಬಿಹಾಳ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಹಾಸ್ಟೇಲಿನ ಹೊರಗುತ್ತಿಗೆ ನೌಕರನೊಬ್ಬ ಸ್ಥಳೀಯ ಪುರಸಭೆ ಸದಸ್ಯರೊಬ್ಬರ ಒತ್ತಡಕ್ಕೆ ಮಣಿದು ಸಮಾಜ ಕಲ್ಯಾಣಾಧಿಕಾರಿ ತಮ್ಮನ್ನು ವರ್ಗಾವಣೆ ಮಾಡಿಸಿದ್ದಕ್ಕೆ ಬೇಸತ್ತು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಯಹತ್ಯೆಗೆ ಯತ್ನಿಸಿದ ಘಟನೆ ಮುದ್ದೇಬಿಹಾಳ ಪಟ್ಟಣದ ಪಿಲೇಕೆಮ್ಮ ನಗರದಲ್ಲಿ ನಡೆದಿದ್ದು ಜೀವ ಭೀತಿಯಿಂದ ಚೀರಾಡುತ್ತಿದ್ದ ಆತನನ್ನು ಆತನ ಮನೆಯವರೇ ರಕ್ಷಿಸಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಮುದ್ದೇಬಿಹಾಳ ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲೇ ಇರುವ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹತ್ತಿರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೇಲ್‌ ಇದೆ. ಈ ಹಾಸ್ಟೇಲಿನಲ್ಲಿ ಹೊರಗುತ್ತಿಗೆ ಡಿ ದರ್ಜೆ ನೌಕರನಾಗಿ 15-20 ವರ್ಷಗಳಿಂದ ತನ್ನ ಪತ್ನಿ ಮಹಾದೇವಿ ಚಲವಾದಿ ಅವರೊಂದಿಗೆ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ ಚಲವಾದಿಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್‌ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಆತ್ಮಹತ್ಯೆಯಿಂದ ಬಚಾವಾದ ವಿಷಯ ತಿಳಿದು ಸೋಮವಾರ ರಾತ್ರಿಯೇ ಸಂಘದ ಜಿಲ್ಲಾ ಪದಾಧಿಕಾರಿಗಳು ಇಲ್ಲಿಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಂಗಳವಾರ ಆಸ್ಪತ್ರೆಯಲ್ಲೇ ಪ್ರತಿಭಟನೆ ನಡೆಸಲು ಮುಂದಾದಾಗ ಆತ್ಮಹತ್ಯೆ ಪ್ರಯತ್ನದ ಘಟನೆ ಬಹಿರಂಗಗೊಂಡಿದೆ.

ಸಕಾಲಿಕ ಚಿಕಿತ್ಸೆಯಿಂದಾಗಿ ಮಲ್ಲಿಕಾರ್ಜುನ ಪ್ರಾಣಾಪಾಯದಿಂದ ಪಾರಾಗಿದ್ದು ಸದ್ಯ ಸರ್ಕಾರಿ ಆಸ್ಪತ್ರೆಯಲ್ಲೇ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನಮ್ಮ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷರೂ ಆಗಿದ್ದು ತಮ್ಮ ಪತ್ನಿ ಮಹಾದೇವಿ ಚಲವಾದಿ ಅವರೊಂದಿಗೆ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೇಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಪುರಸಭೆ ಸದಸ್ಯರೊಬ್ಬರು ಪತಿ, ಪತ್ನಿ ಇಬ್ಬರನ್ನೂ ಬೇರೆ ಕಡೆ ವರ್ಗ ಮಾಡಿಸಲು ಸಂಚು ನಡೆಸಿದ್ದರು. ಇದಕ್ಕೆ ಸಮಾಜ ಕಲ್ಯಾಣಾಧಿಕಾರಿಗಳು ಸಹಕಾರ ನೀಡಿದ್ದರು. ಇದರ ಪರಿಣಾಮ ಮನ ನೊಂದು ಮಲ್ಲಿಕಾರ್ಜುನ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಸಂಘದ ವಿಜಯಪುರ ಜಿಲ್ಲಾ ಘಟಕ ಹಾಗೂ ಮುದ್ದೇಬಿಹಾಳ ತಾಲೂಕು ಘಟಕದ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲೇ ಪ್ರತಿಭಟಿಸಲು ಮುಂದಾಗಿದ್ದರು. ಇದನ್ನರಿತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್‌.ಆರ್‌. ಉಂಡಿಗೇರಿ ಆಸ್ಪತ್ರೆಗೆ ಧಾವಿಸಿ ಬಂದರು. ಈ ವೇಳೆ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.

Advertisement

ಮಲ್ಲಿಕಾರ್ಜುನ ಚಲವಾದಿ ಮತ್ತು ಅವರ ಪತ್ನಿ ಮಹಾದೇವಿ ಚಲವಾದಿ ಅವರನ್ನು ಇಲ್ಲೇ ಮುಂದುವರಿಸಬೇಕು. ಮಲ್ಲಿಕಾರ್ಜುನನ ಆರೋಗ್ಯ ಸುಧಾರಿಸುವ ತನಕ ಬೆಡ್‌ರೆಸ್ಟ್‌ ನೀಡಬೇಕು. ಆರೋಗ್ಯ ಸುಧಾರಿಸುವ ತನಕ ಮಲ್ಲಿಕಾರ್ಜುನನ ವೇತನ ಚಾಲ್ತಿಯಲ್ಲಿಡಬೇಕು. ಆಸ್ಪತ್ರೆ ಖರ್ಚನ್ನು ನೀಡಬೇಕು. ಬೇರೆ ಯಾವುದೇ ಹಾಸ್ಟೇಲುಗಳಲ್ಲಿ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲ ಹೊರಗುತ್ತಿಗೆ ನೌಕರರ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಂಡಿಗೇರಿ ಅವರು, ಸ್ಥಳೀಯ ಪುರಸಭೆ ಸದಸ್ಯರೊಬ್ಬರು ಮಲ್ಲಿಕಾರ್ಜುನ, ಮಹಾದೇವಿ ಇಬ್ಬರನ್ನೂ ಬೇರೆಡೆ ವರ್ಗ ಮಾಡಲು ನನಗೆ ಪತ್ರ ಕೊಟ್ಟು ಒತ್ತಾಯಿಸಿದ್ದರು. ಇವರ ವರ್ಗಾವಣೆಗೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡದಿದ್ದರೆ ನನ್ನ ಮೇಲೆ ಆ್ಯಕ್ಷನ್‌ ತೆಗೆದುಕೊಳ್ಳುತ್ತೇನೆ ಎಂದು ಬೆದರಿಸಿದ್ದರು. ಜನ ಪ್ರತಿನಿಧಿ ಮಾತಿಗೆ ಕಟ್ಟುಬಿದ್ದು ಮೇಲಾಧಿಕಾರಿಗಳಿಗೆ ಇವರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದ್ದೆ. ಆದರೆ ಈಗ ಮಲ್ಲಿಕಾರ್ಜುನನ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದನ್ನು ಅರಿತು ಆ ಸದಸ್ಯರು ತಾವು ಕೊಟ್ಟ ವರ್ಗಾವಣೆ ಪತ್ರವನ್ನು ಮರಳಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿ ತಮ್ಮ ಅಸಹಾಯಕತೆ ತೋಡಿಕೊಂಡರು.

ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ, ವಿಜಯಪುರ ನಗರ ಘಟಕದ ಅಧ್ಯಕ್ಷ ಭೀಮು ಸನದಿ, ಜಿಲ್ಲಾ ಮುಖಂಡರಾದ ಲಕ್ಷ್ಮ್ಮಣ ಮಸಳಿ, ಲಾಳೇಮಶ್ಯಾಕ, ಮಾಳಪ್ಪ ಇಂಗಳಗಿ, ಸಂಗಮೇಶ ಚಲವಾದಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next