ಕೊರಟಗೆರೆ : ಪೆಟ್ರೋಲ್ ಬಂಕ್ ಮ್ಯಾನೇಜರ್ ಓರ್ವ ಮಾಲಕನಿಗೆ ಕೊಡಬೇಕಾದಂತ 8 ಲಕ್ಷ ಹಣಕ್ಕಾಗಿ ಹಾಗೂ ಕೆಲವೊಂದು ಕೈ ಸಾಲಗಳಿಂದ ಬೇಸತ್ತು ತೀತಾ ಡ್ಯಾಮ್ ಗೆ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಪಕ್ಕದಲ್ಲಿಯೇ ಇದ್ದ ಭರತ್ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್ (22) ಎಂಬ ಯುವಕ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡವನು.
ಜಗದೀಶ್ ತೀತಾ ಗ್ರಾಮದ ದಿವ್ಯಾನಂದ ಎಂಬವರ ಪುತ್ರ, ಕಳೆದ ಐದು ವರ್ಷಗಳಿಂದಲೂ ಭರತ್ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಾಲಕರಿಗೆ ಪೆಟ್ರೋಲ್ ಬಂಕ್ ನಲ್ಲಿ 8 ಲಕ್ಷ ಹಣ ಕಟ್ಟಬೇಕಿದ್ದು, ಮಂಗಳವಾರ ಕಟ್ಟಲು ಗಡುವು ನೀಡಿದ್ದು, ಜೊತೆಗೆ ಕೈ ಸಾಲ ಜಾಸ್ತಿ ಆದ ಕಾರಣ ಯುವಕ ಜಗದೀಶ್ ಗೆ ದಿಕ್ಕು ತೋಚದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.
ಮೃತ ಜಗದೀಶ್ ಬುಧವಾರ ಬೆಳಗ್ಗೆ 9 ಗಂಟೆಗೆ ತಿಂಡಿ ತಿಂದು ಬರುವುದಾಗಿ ಹೇಳಿ ಪೆಟ್ರೋಲ್ ಬಂಕ್ ನಿಂದ ತನ್ನ ದ್ವಿಚಕ್ರ ವಾಹನದಲ್ಲಿ ಹೋದವ ಮಧ್ಯಾಹ್ನ 2 ಗಂಟೆಯಾದರೂ ಬಾರದ ಕಾರಣ ಹಲವು ಬಾರಿ ಮೊಬೈಲ್ ಗೆ ಕರೆ ಮಾಡಿದರೂ ಸ್ವಿಚ್ ಆಫ್ ಆದ ಕಾರಣ ಅನುಮಾನ ಗೊಂಡ ಪೆಟ್ರೋಲ್ ಬಂಕ್ ನ ಸಹ ಕೆಲಸಗಾರರು ಮಾಲಕರಿಗೆ ತಿಳಿಸಿ ನಂತರ ಸ್ನೇಹಿತರಿಗೆ ಹಾಗೂ ಪೋಷಕರಿಗೆ ದೂರವಾಣಿ ಮೂಲಕ ತಿಳಿಸಲಾಗಿ ಎಲ್ಲೂ ಇಲ್ಲದ ಕಾರಣ ಹುಡುಕಾಟ ಪ್ರಾರಂಭಿಸಿದಾಗದ್ವಿಚಕ್ರ ವಾಹನ ಹಾಗೂ ಪಾದರಕ್ಷೆಗಳು ತೀತಾ ಜಲಾಶಯದ ಭಾಗದಲ್ಲಿ ಬಿಟ್ಟಿರೋದು ಕಂಡು ಬಂದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಿರ್ಧರಿಸಲಾಯಿತು ಎನ್ನಲಾಗಿದೆ.
ಅಗ್ನಿಶಾಮಕ ದಳದಿಂದ ಸತತ ಎರಡು ದಿನಗಳ ಕಾರ್ಯಾಚರಣೆ
ತೀತಾ ಜಲಾಶಯ ಜಿಲ್ಲೆಯ ಅತಿ ದೊಡ್ಡ ಜಲಾಶಯಗಳಲ್ಲೊಂದಾಗಿದ್ದು, ಜಲಾಶಯ ನೀರಿನಿಂದ ಭರ್ತಿಯಾಗಿದ್ದು, ಸುತ್ತಳತೆ 5-6 ಕಿಲೋಮೀಟರ್ ಇರುವುದರಿಂದ ಜಗದೀಶ್ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ನುರಿತ ಈಜು ಪಟುಗಳು ಅವಿರತ ಶ್ರಮ ಗುರುವಾರ ಸಂಜೆ ಮೃತ ದೇಹವನ್ನು ಪತ್ತೆ ಹಚ್ಚಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ರೇಣುಕಾ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.