ಗಾಂಧಿನಗರಕ್ಕೆ ತಿರ್ಬೋಕಿಗಳ ತಂಡ ಬಂದಿದೆ. ಕೇವಲ ಬಂದಿದ್ದಷ್ಟೇ ಅಲ್ಲ, 10 ದಿನಗಳ ಕಾಲ ಚಿತ್ರೀಕರಣ ಕೂಡಾ ಆಗಿದೆ!
ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು ಸಿನಿಮಾವೊಂದರ ಬಗ್ಗೆ. “ತಿರ್ಬೋಕಿಗಳು’ ಎಂಬ ಟೈಟಲ್‌ನಡಿ ಸಿನಿಮಾವೊಂದು ಆರಂಭವಾಗಿದೆ. ಇದು ಸಂಪೂರ್ಣ ಹೊಸಬರ ತಂಡ. ಕೆಲಸ ಕಾರ್ಯವಿಲ್ಲದೇ, ಹಳ್ಳಿಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುವವರಿಗೆ ತಿರ್ಬೋಕಿಗಳು ಎಂದು ಕರೆಯುತ್ತಾರೆ. ಈ ಚಿತ್ರ ಕೂಡಾ ಅದೇ ಕಾನ್ಸೆಪ್ಟ್ನಡಿ ತಯಾರಾಗುತ್ತಿದೆ. ನಾಲ್ಕು ಮಂದಿ ಹುಡುಗರ ಸುತ್ತ ಈ ಸಿನಿಮಾ ಸುತ್ತಲಿದೆಯಂತೆ. ಮಾಗಡಿ ಕೆಂಪೇಗೌಡ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಸಿನಿಮಾ ಬಗ್ಗೆ ಹೆಚ್ಚೇನು ಅವರು ಮಾತನಾಡಲಿಲ್ಲ. ಈಗಾಗಲೇ 10 ದಿನ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡರು. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಯಿತು.
ಚಿತ್ರದಲ್ಲಿ ಪರಿಚಿತ ಮುಖ ಎಂದಿರೋದು ಭೂಷಣ್. ಈ ಹಿಂದೆ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದ ಭೂಷಣ್, “ತಿರ್ಬೋಕಿಗಳು’ ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ. ಭೂಷಣ್ ಮೂಲತಃ ಡ್ಯಾನ್ಸರ್ ಆಗಿರುವುದರಿಂದ ಸಿನಿಮಾದಲ್ಲೂ ಡ್ಯಾನ್ಸ್‌ಗೆ ಹೆಚ್ಚಿನ ಸ್ಕೋಪ್ ಇದೆಯಂತೆ. “ಡ್ಯಾನ್ಸ್ ಮಾಡುತ್ತಿದ್ದ ನನ್ನನ್ನು ಎಲ್ಲರೂ ಬೆನ್ನು ತಟ್ಟಿದ ಪರಿಣಾಮ ಈಗ ಹೀರೋ ಆಗುತ್ತಿದ್ದೇನೆ. ಹಾಗಂತ ಇದು ದೊಡ್ಡ ಬಜೆಟ್ ಸಿನಿಮಾವಲ್ಲ. ಹೊಸಬರಾಗಿರುವುದರಿಂದ ರಿಸ್ಕ್ ಹಾಕಿಕೊಳ್ಳೋದು ಬೇಡವೆಂದು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾ ಮೂಲಕ ಒಂದಷ್ಟು ಮಂದಿ ಡ್ಯಾನ್ಸರ್‌ಗಳು ಒಟ್ಟಾಗಿದ್ದೇವೆ’ ಎಂದರು ಭೂಷಣ್.
ಈ ಚಿತ್ರವನ್ನು ನಾಗರಾಜ್ ಅವರು ನಿರ್ಮಿಸುತ್ತಿದ್ದಾರೆ. ಭೂಷಣ್ ಪ್ರತಿಭೆಯನ್ನು ಗಮನಿಸಿದ ಅವರು ಈ ಸಿನಿಮಾ ಮಾಡಲು ಮುಂದಾದರಂತೆ. ಚಿತ್ರದಲ್ಲಿ ನಟಿಸುತ್ತಿರುವ ರಣಧೀರ್, ಸಂತೋಷ್ ಹಾಗೂ ಮನೋಜ್ ಕುಮಾರ್ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರದಲ್ಲಿ ಮಾನ್ಯ ನಾಯಕಿ. ಮೂಲತಃ ಡ್ಯಾನ್ಸರ್ ಆದ ಮಾನ್ಯಗೆ ಈಗ ಡ್ಯಾನ್ಸರ್‌ಗಳ ತಂಡದಲ್ಲಿ ಕೆಲಸ ಮಾಡುತ್ತಿರುವ ಖುಷಿ. ತಿರ್ಬೋಕಿಗಳ ತಂಡದಲ್ಲಿ ಬೆಸ್ಟ್ ತಿಬೋìಕಿಯನ್ನು ಲವ್ ಮಾಡುವ ಪಾತ್ರವಂತೆ. ಚಿತ್ರದಲ್ಲಿ ಹಿರಿಯ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಕೂಡಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ಜ್ಞಾನಿಯ ಪಾತ್ರ. ಅವರ ಮಾತಿನಿಂದ ತಿರ್ಬೋಕಿಗಳು ಹೇಗೆ ಬದಲಾಗುತ್ತಾರೆಂಬುದು ಚಿತ್ರದ ಟ್ವಿಸ್ಟ್ ಅಂತೆ. ಸುಂದರಂ ಮಾಸ್ಟರ್ ಅವರಿಗೆ ನಟಿಸಬೇಕೆಂದು ಇಷ್ಟು ವರ್ಷ ಅನಿಸಿರಲಿಲ್ಲವಂತೆ. ಆದರೆ, ಈಗ ಕೆಲವರು ಒತ್ತಾಯ ಮಾಡುತ್ತಿರುವುರಿಂದ ನಟಿಸುತ್ತಿರುವುದಾಗಿ ಹೇಳಿದರು. ಜೊತೆಗೆ ಭೂಷಣ್ ಅವರ ಟ್ಯಾಲೆಂಟ್ ಅನ್ನು ಕೊಂಡಾಡಿದರು. ಚಿತ್ರಕ್ಕೆ ಪ್ರಖ್ಯಾತ್ ಛಾಯಾಗ್ರಹಣ, ಸುರೇಂದ್ರನಾಥ್ ಸಂಗೀತವಿದೆ.