Advertisement

ಮತ್ತೆ ಕೃಷ್ಣ ದೇವರಾಯನ ಆಡಳಿತ ಬರಬೇಕಾದರೆ ಟಿಪ್ಪು ಸುಲ್ತಾನ್ ತೊಲಗಲಿ : ನಳಿನ್

08:34 PM Feb 13, 2023 | Team Udayavani |

ಕುರುಗೋಡು/ ಕಂಪ್ಲಿ: ಮತ್ತೊಮ್ಮೆ ರಾಜ್ಯದಲ್ಲಿ ಕೃಷ್ಣ ದೇವರಾಯನ ಆಡಳಿತ ಬರಬೇಕೆಂತಾದರೆ, ಟಿಪ್ಪು ಸುಲ್ತಾನ್ ತೊಲಗುವ ಜತೆಗೆ ಬಿಜೆಪಿ ಸರಕಾರ ರಚನೆಯಾಗಬೇಕು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Advertisement

ಪಟ್ಟಣದ ಎಸ್.ಎನ್ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಂಪ್ಲಿ ಮಂಡಲದಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಪೇಜ್ ಪ್ರಮುಖರ ಸಮಾವೇಶದಲ್ಲಿ ಭತ್ತ ರಾಶಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಂಪ್ಲಿಯಲ್ಲಿ ಟಿಪ್ಪು ಸುಲ್ತಾನ್ ಬಿಟ್ಟು, ಕೃಷ್ಣನ ಆರಾಧನೆ ಮಾಡಬೇಕು. ಸಿದ್ದರಾಮಯ್ಯ ಮುಂದಿನ ದಿನದಲ್ಲಿ ನಿವೃತ್ತಿಯಾಗುತ್ತಾರೆ. ಬಿಜೆಪಿ ಹಡಗು ತೇಲುತ್ತಿದೆ. ಕಾಂಗ್ರೆಸ್ ಮುಳುಗುತ್ತಿದೆ. ಸಿದ್ದು-ಡಿಕೆಶಿ ನಡುವೆ ಕಾಳಗ ನಡೆಯುತ್ತಿದೆ. ರಾಜ್ಯ ಸೇರಿದಂತೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.

ಸಂಘಟನಾತ್ಮಕವಾಗಿ ಪಕ್ಷ ಬೆಳೆಯುತ್ತಿದೆ. ಡಿಕೆಶಿಗೆ ರಾಜ್ಯದಲ್ಲಿ ಪದಾಧಿಕಾರಿಗಳು ಸಭೆ ಮಾಡುವುದಕ್ಕೆ ಆಗಲಿಲ್ಲ. ಪ್ರಜಾಧ್ವನಿ ಪ್ರಾರಂಭ ಮಾಡಿದ್ದೀರಿ, ಕಾರ್ಯಕರ್ತರೇ ಇಲ್ಲ, ಯಾವ ಧ್ವನಿ ಮಾಡುತ್ತಿದ್ದೀರಿ ಎಂಬ ಪ್ರಶ್ನೆಯಾಗಿದೆ. ಇಂದಿರಾಗಾಂಧಿ ಕಾಲ ಘಟ್ಟದಲ್ಲಿ ಒಂದು ಕಂಬ ನಿಂತರೂ ಗೆಲ್ಲುತ್ತಿತ್ತು. ಆದರೆ, ಈಗ ಆ ಕಾಲ ಘಟ್ಟ ಹೋಗಿ ಮೋದಿಘಟ್ಟ ಬಂದಿದೆ. ಸಿದ್ದರಾಮಣ್ಣಗೆ ಎಲ್ಲಿಯೂ ಜಾಗ ಇಲ್ಲ. ಸಿದ್ದರಾಮಯ್ಯ ಬಾದಮಿಗೆ ಬಂದರೆ ನಮ್ಮ ಶಕ್ತಿ ತೋರಿಸುತ್ತೇವೆ. ಬರುವ ಚುನಾವಣೆಯಲ್ಲಿ ಕಂಪ್ಲಿಯಲ್ಲಿ ಕಮಲ ಅರಳಲಿದೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸಿದೆ. ಭಾರತ್ ಜೋಡೋ ಮಾಡಿದ್ದು ನರೇಂದ್ರ ಮೋದಿ. ಹುಟ್ಟಿನಿಂದ ಸಾವಿನವರೆಗೂ ಯೋಜನೆಗಳನ್ನು ಕೊಟ್ಟಿದ್ದು ಮೋದಿಯವರು. ಟಿಪ್ಪು ಸುಲ್ತಾನ ಬೇಕಾ ಕೃಷ್ಣ ದೇವರಾಯನ ಸಂತಾನ ಬೇಕಾ? ಎಂದರು.

ಮೋದಿಯವರು ರೈತರ ರಕ್ಷಣೆ ಮಾಡಿದ್ದಾರೆ. ಕಂಪ್ಲಿಯಲ್ಲಿ ಇರುವಂತಹ ಚಿಂತಾಜನಕ ರಸ್ತೆಯನ್ನು ಎಲ್ಲಿಯೂ ನೋಡಿಲ್ಲ. ಶಾಸಕರು ಎಲ್ಲಿದ್ದಾರೇ, ಕಂಪ್ಲಿಯಲ್ಲಿ ಬಿಜೆಪಿ ಆರಿಸಿ, ಮಾದರಿ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡಿ. ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ಕೊಡಿ. ನಿಮ್ಮ ಒಂದು ವೋಟು ಕರ್ನಾಟಕವನ್ನು ಪರಿವರ್ತನೆ ಮಾಡುತ್ತದೆ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಮಾತನಾಡಿ, ಸರ್ಕಾರ ಮತ್ತು ಇಲಾಖೆಯ ಸಹಯೋಗದಲ್ಲಿ ಕಂಪ್ಲಿ ಉತ್ಸವವನ್ನು ವಿಜೃಂಭಣೆಯಿಂದ ಮಾಡಲಾಗಿದೆ. ದೇಶ ಕಟ್ಟುವ ಪಕ್ಷ ಬಿಜೆಪಿ ಪಕ್ಷ. ಬೇರೆಯವರ ತರದಂತೆ ಚುನಾವಣೆ ಸಂದರ್ಭದಲ್ಲಿ ಆಮೀಷಗಳನ್ನು ನೀಡುವ ಪಕ್ಷ ನಮ್ಮದಲ್ಲಾ. ಕಾಂಗ್ರೆಸ್ ಭಾರತ ಜೋಡೋ ಯಾತ್ರೆಯು ಯಾವುದರ ಸಾಧನೆ ಎಂಬುದು ಗೊತ್ತಾಗುತ್ತಿಲ್ಲ. ಮೂರು ತಿಂಗಳ ಯಾತ್ರೆಯಲ್ಲಿ ರಾಹುಲ್ ಗಾಂಧಿ ಗಡ್ಡ ಬೆಳೆದಿದ್ದು ಬಿಟ್ಥರೆ ಯಾವುದೇ ವ್ಯತ್ಯಸ ಕಂಡಿಲ್ಲ. ಕಾಂಗ್ರೆಸ್ ಅವರಿಗೆ ಅಧಿಕಾರ ಇಲ್ಲದಿರುವುದಿಂದ ಏನೇನೋ ಮಾಡುತ್ತಿದ್ದಾರೆ. ಇಂತವರು ದೇಶ ರಕ್ಷಣೆ ಏನು ಮಾಡುತ್ತಾರೆ. ನಾಯಕತ್ವ ಗುಣಗಳಿರುವ ನರೇಂದ್ರ ಮೋದಿಯವರಿಂದ ಮಾತ್ರ ದೇಶ ರಕ್ಷಣೆ ಮಾಡಲು ಸಾಧ್ಯ. ಈ ಹಿನ್ನಲೆಯಲ್ಲಿ ಈಗ ಭಾರತ ವಿಶ್ವಗುರುವಾಗಿದೆ. 2023ರಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಶ್ಮೀರದಲ್ಲಿ 370 ಸ್ಥಾನಮಾನ ತೆರೆದಿರುವುದು ಗುಂಡಿಗೆ ನರೇಂದ್ರ ಮೋದಿಯದ್ದಾಗಿದೆ. ಬರುವ ಚುನಾವಣೆಯಲ್ಲಿ ಸುರೇಶ್ ಬಾಬು ಗೆಲ್ಲುತ್ತಾರೆ. ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಆಳ್ವಿಕೆ ಮಾಡಲಿದೆ ಎಂದು ಭವಿಷ್ಯ ನುಡಿದರು.

Advertisement

ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿ, ಸಂಘಟನೆಯಿಂದ ಬಿಜೆಪಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪೇಜ್ ಪ್ರಮುಖರನ್ನು ಮುಂದಿನ ಚುನಾವಣೆಗೆ ಸಿದ್ದಗೊಳಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ಕಂಪ್ಲಿ ಮತ್ತು ಕುರುಗೋಡು ತಾಲೂಕು ಮಾಡಿದ ಕೀರ್ತಿ ಬಿಜೆಪಿ ಪಕ್ಷದ್ದಾಗಿದೆ. ನೂರು ಹಾಸಿಗೆ ಆಸ್ಪತ್ರೆ, ಕಂಪ್ಲಿ ಸೇತುವೆಗೆ 75 ಕೋಟಿ ಅನುದಾನವನ್ನು ಬಿಜೆಪಿ ನೀಡಿದೆ. ಬಹುದಿನದ ಬೇಡಿಕೆಯಂತೆ ಎಸ್ಸಿ, ಎಸ್ಟಿಗೆ ಹೆಚ್ಚಿನ ಮೀಸಲಾತಿ ನೀಡಿದ ಸರ್ಕಾರ ಬೊಮ್ಮಾಯಿ ಸರ್ಕಾರದ ಹೆಗ್ಗಳಿಕೆಯಾಗಿದೆ. ಸರ್ಕಾರದ ಅನುದಾನದಿಂದ ಕಂಪ್ಲಿ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ದೇಶವನ್ನು ಕಟ್ಟುವ ಪಕ್ಷ ಬಿಜೆಪಿಯಾಗಿದೆ. ಶಿಸ್ತಿನ ಸಿಪಾಯಿಯಂತೆ ಭಾರತೀಯ ಜನತಾ ಪಾರ್ಟಿಯ ಏಳಿಗೆಗೆ ಶ್ರಮಿಸಬೇಕು. ಕಂಪ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ವೋಟ್ ಬ್ಯಾಂಕ್ ಕಡಿಮೆಯಾಗಿಲ್ಲ. ಬೂತ್ ಶಕ್ತಿ ಮಾಡಿದರೆ, ಗೆಲುವು ಸಾಧ್ಯ. ಪೇಜ್ ಪ್ರಮುಖರ ಮುಖಾಂತರ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಮುರಾಹರಿಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯನ್ನು ಗಟ್ಟಿಗೊಳಿಸುವ ಜತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಹುಮ್ಮಸ್ಸು ನೀಡುವ ನಿಟ್ಟಿನಲ್ಲಿ ಪೇಜ್ ಪ್ರಮುಖರ ಸಮಾವೇಶ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟದಲ್ಲಿ ಬಿತ್ತರಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜ, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವಿರೇಶ, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಉಪಾಧ್ಯಕ್ಷೆ ಕೆ.ನಿರ್ಮಲ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ, ಸದಸ್ಯರು, ಮುಖಂಡರಾದ ಸಿದ್ದೇಶ್ ಯಾದವ್, ಚಂದ್ರಶೇಖರ್ ಅಲಗೇರಿ, ಪೂಜಪ್ಪ, ಸಚ್ಚಿದಾನಂದ ಮೂರ್ತಿ, ಸಿಂಗನಾಳ್ ವಿರೂಪಾಕ್ಷಪ್ಪ, ಗುತ್ತಿಗೆನೂರು ವಿರೂಪಾಕ್ಷಗೌಡ, ಗುರುಲಿಂಗನಗೌಡ, ರಾಮಲಿಂಗಪ್ಪ, ತಿಮ್ಮಾರೆಡ್ದಿ, ಅಶೋಕ ಕುಮಾರ, ಹೂವಣ್ಣ, ಬ್ರಹ್ಮಯ್ಯ, ಪುರುಷೋತ್ತಮ, ಸಿದ್ದಪ್ಪ, ಕಡೆಮನೆ ಪಂಪಾಪತಿ, ವೆಂಕಟರಾಮರಾಜು, ಭಾಸ್ಕರ್ ರೆಡ್ಡಿ, ಸಿ.ಡಿ.ಮಹಾದೇವ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next