ಮೈಸೂರು: ‘ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ’ ನಾಟಕ ನೋಡಲು ಬಂದ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ಅವರನ್ನು ಪೊಲೀಸರು ತಡೆದು ಪ್ರಶ್ನಿಸಿರುವ ಪ್ರಸಂಗ ನಡೆದಿದೆ.
‘ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ’ ನಾಟಕವನ್ನು ನಿಲ್ಲಿಸಬೇಕೆಂದು ನಿನ್ನೆಯಷ್ಟೇ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ಪತ್ರ ಬರೆದಿದ್ದರು.
ಭಾನುವಾರ ರಂಗಾಯಣದಲ್ಲಿ ಪ್ರದರ್ಶನ ಕಾಣುವ ‘ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ’ ನೋಡಲು ಟಿಪ್ಪು ಪುಸ್ತಕದ ಲೇಖಕ ಲೇಖಕ ಟಿ. ಗುರುರಾಜ್ ಜೊತೆ ಬಸವಲಿಂಗಯ್ಯ ಬಂದಿದ್ದಾರೆ. ಈ ವೇಳೆ ಪೊಲೀಸರು ಬಸವಲಿಂಗಯ್ಯ ಅವರನ್ನು ಒಳಗೆ ಬಿಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಬಸವಲಿಂಗಯ್ಯ ರಂಗಾಯಣದ ಮುಂಭಾಗ ಧರಣಿ ಕುಳಿತಿದ್ದಾರೆ. ಟಿಕೆಟ್ ಖರೀದಿಸಿ ಬಂದಿದ್ದೇನೆ ಯಾಕೆ ಬಿಡುವುದಿಲ್ಲ ಎಂದು ಪೊಲೀಸರ ಜೊತೆ ವಾದ ಮಾಡಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಂತರ ಬಸವಲಿಂಗಯ್ಯ ಹಾಗೂ ಟಿ. ಗುರುರಾಜ್‌ರನ್ನು ಪೊಲೀಸರು ಒಳಗೆ ಬಿಟ್ಟಿದ್ದಾರೆ.
ಅಡ್ಡಂಡ ಕಾರ್ಯಪ್ಪ ಇಬ್ಬರನ್ನೂ ಸ್ವಾಗತ ಕೋರಿ ಒಳಗೆ ಕರೆದುಕೊಂಡು ಹೋದರು.