ತಿ.ನರಸೀಪುರ: ತಾಲೂಕು ಕಚೇರಿ ಹೊರ ಆವರಣದಲ್ಲಿಯೇ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡುವಂತೆ ಮುಸ್ಲಿಂ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟಗಾರರು ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಪೂರ್ವಸಿದ್ಧತಾ ಸಭೆಯಲ್ಲಿ ಒಳ ಆವರಣದಲ್ಲಿ ಜಯಂತಿ ನಡೆಸುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಹೊರ ಆವರಣದಲ್ಲಿ ಆಚರಣೆಗೆ ಅವಕಾಶವಿಲ್ಲವೆಂಬ ತಾಲೂಕು ಆಡಳಿತದ ಉತ್ತರವನ್ನು ಒಪ್ಪದ ಹಲವು ಮುಖಂಡರು ಸರ್ಕಾರದ ಟಿಪ್ಪು ಜಯಂತಿಯನ್ನೇ ಬಹಿಷ್ಕರಿಸುವ ಬೆದರಿಕೆ ಹಾಕಿದರು.
ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷಾ, ತಾಲೂಕು ಕಚೇರಿ ಆವರಣದಲ್ಲಿ ಟಿಪ್ಪು ಜಯಂತಿ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ದೊರೆತ ನಂತರವಷ್ಟೇ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಬಸವರಾಜು ಚಿಗರಿ, ಸಭೆಯಲ್ಲಿನ ಮುಖಂಡರ ಸಲಹೆ ಸೂಚನೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಸಿಪಿಐ ಮನೋಜ್‌ಕುಮಾರ್, ತಾಲೂಕು ಆಡಳಿತ ತೆಗೆದುಕೊಳ್ಳುವ ನಿರ್ಣಯಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಬನ್ನೂರು ಪುರಸಭೆ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಎನ್‌ಕೆಎಫ್ ಫೌಂಡೇಷನ್‌ನ ಅಧ್ಯಕ್ಷ ಎನ್.ಕೆ.ಫರೀದ್, ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕ ಬಿ.ಮನ್ಸೂರ್ ಅಲಿ,
-ತಾಪಂ ಸದಸ್ಯರಾದ ಬಿ.ಸಾಜಿದ್ ಅಹಮ್ಮದ್, ಕೆ.ಎಸ್.ಗಣೇಶ್, ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಮುದ್ದಬೀರನಹುಂಡಿ ಮಹದೇವ, ಆಲಗೂಡು ನಾಗರಾಜು, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮ್ಜದ್ ಖಾನ್ ಮತ್ತಿತರರಿದ್ದರು.