ಪುತ್ತೂರು : ಸಾವಿರಾರು ಹಿಂದೂಗಳ ಹತ್ಯೆಗೆ ಕಾರಣವಾಗಿದ್ದ ಟಿಪ್ಪುವಿನ ಜಯಂತಿ ಆಚರಣೆಯನ್ನು ಕಾಂಗ್ರೆಸ್ ಆರಂಭಿಸಿತ್ತು. ಆದರೆ ಅದನ್ನು ಬಿಜೆಪಿ ಸರಕಾರ ರದ್ದು ಮಾಡುವ ಮೂಲಕ ಬಹುಸಂಖ್ಯಾಕರ ಭಾವನೆಗಳಿಗೆ ಗೌರವ ನೀಡಿತು. ಅಲ್ಲದೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದದ್ದು ಕೂಡ ಬಿಜೆಪಿ ಸರಕಾರ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ತಿಳಿಸಿದರು.
ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ, ಒಳಮೊಗ್ರು, ಕುರಿಯ, ಆರ್ಯಾಪು, ಮುಂಡೂರು-ಕೆಮ್ಮಿಂಜೆ, ಸರ್ವೆ, ಶಾಂತಿಗೋಡು ಮೊದಲಾದೆಡೆ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಹೈನುಗಾರರ ಸ್ವಾಭಿಮಾನದ ಬದುಕಿನ ಪ್ರತೀಕವಾದ, ಹಿಂದೂಗಳ ಶ್ರದ್ದಾ ಮಾತೆ ಗೋವಿನ ಮೂಲಕ ಬದುಕು ಕಟ್ಟಿಕೊಂಡ ಲಕ್ಷಾಂತರ ಕುಟುಂಬಗಳು ನಮ್ಮ ಕಣ್ಣ ಮುಂದಿವೆ. ಹಾಲು ಮಾರಿ ಬದುಕು ಕಟ್ಟಿಕೊಂಡ ಬಡಪಾಯಿ ಕುಟುಂಬಗಳ ಹಟ್ಟಿಯಿಂದಲೇ ತಲವಾರು ಮಾರಕಾಸ್ತ್ರ ತೋರಿಸಿ ಹಸುಗಳನ್ನು ಕದ್ದೊಯ್ಯುವ ಕಟುಕರಿಗೆ ಕಡಿವಾಣ ಹಾಕಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದ ಸರಕಾರವಿದ್ದರೆ ಅದು ಬಿಜೆಪಿ ಸರಕಾರ ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರಕಾರದ ಸಾಧನೆ, ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದಲ್ಲಿ ಬಿಜೆಪಿ ಈ ಬಾರಿ ಚುನಾವಣೆ ಎದುರಿಸಲಿದೆ. ಸಾಮಾಜಿಕ ಶಾಂತಿ ಸಾಮರಸ್ಯ, ಅಭಿವೃದ್ಧಿಯ ಆಧಾರದಲ್ಲಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ದೇಶದಲ್ಲಿ ಅತಿ ಹೆಚ್ಚು ಕಾರ್ಯಕರ್ತರ ಪಡೆಯನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ.ಇಡೀ ಜಗತ್ತು ಭಾರತದ ಕಡೆ ಮುಖ ಮಾಡುವಂತೆ ಅಭಿವೃದ್ಧಿ ಮಾಡಿದ ಸರಕಾರ ಬಿಜೆಪಿ. ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಕ್ಷೇತ್ರದ ಮನೆ ಮನೆಗಳಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿ.ಪಂ.ಮಾಜಿ ಸದಸ್ಯರಾದ ಮೀನಾಕ್ಷಿ ಮಂಜುನಾಥ್, ತ್ರಿವೇಣಿ ಕರುಣಾಕರ ಪೆರ್ವೋಡಿ, ಪಕ್ಷದ ಮುಖಂಡರಾದ ಸುನೀಲ್ ದಡ್ಡು, ಗೋಪಾಲಕೃಷ್ಣ ಹೇರಳೆ, ಜಗನ್ನಾಥ ರೈ ಕೋರ್ಮಂಡ ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆ
ರೆಂಜ ಮತ್ತು ಬೆಟ್ಟಂಪಾಡಿ ಶಕ್ತಿ ಕೇಂದ್ರ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಪುತ್ತೂರು ಮಂಡಲ ಬಿಜೆಪಿ ಪದಾಧಿಕಾರಿಗಳ ಸಮ್ಮುಖದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.