ಬೆಂಗಳೂರು: ಟಿಪ್ಪು ಜಯಂತಿಯನ್ನು ಬೆಂಬಲಿಸಿದರೆ ಜಾತ್ಯತೀತರು, ವಿರೋಧಿಸಿದರೆ ಜಾತಿವಾದಿಗಳು ಎಂಬ ಯೋಚನೆ ಸರಿಯಿಲ್ಲ ಎಂದಿರುವ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಟಿಪ್ಪು ಒಬ್ಬ ಕೋಮುವಾದಿ, ಧರ್ಮಾಂಧ, ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದನೆಂಬ ಕಾರಣಕ್ಕೆ ಆತನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಬಿಜೆಪಿ ವಿರೋಧಿಸುತ್ತದೆ ಎಂದಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಜವಾದ ಜಾತ್ಯತೀತವಾದ ಎಂದರೆ ಅದು ಎಲ್ಲಾ ಜಾತಿ-ಧರ್ಮಗಳನ್ನು
ರಕ್ಷಿಸುವುದು ಮತ್ತು ಉತ್ತೇಜಿಸುವುದು. ಮತ್ತೂಂದು ಅರ್ಥದಲ್ಲಿ ಸರ್ವಪಂಥ ಸಮಭಾವ ಆಗಿದೆ ಎಂದರು.
ಟಿಪ್ಪು ಜಯಂತಿಯನ್ನು ಬೆಂಬಲಿಸಿದರೆ ಜಾತ್ಯತೀತರು, ವಿರೋಧಿಸಿದರೆ ಜಾತಿವಾದಿಗಳು ಎಂದು ಹೇಳಲಾಗುತ್ತಿದೆ. ಆದರೆ, ಈ ಮಾತೇ ಪೂರ್ವಾಗ್ರಹ ಪೀಡಿತ. ಹಿಂದೂಗಳ ಹತ್ಯೆ ಮಾಡುತ್ತಿದ್ದ ಟಿಪ್ಪು ಜಯಂತಿ ಆಚರಣೆ ನಿಜವಾದ ಕೋಮುವಾದ. ಟಿಪ್ಪು ಆಡಳಿತಕ್ಕೆ ಒಳಪಟ್ಟಿದ್ದ ಕೊಡಗು, ಮಲಬಾರ್ ಭಾಗದ ಎಲ್ಲಾ ಜನ ಟಿಪ್ಪುವನ್ನು ಜಾತ್ಯತೀತವಾದಿ ಎಂದರೆ ಆಗ ಜಯಂತಿಯನ್ನು ಒಪ್ಪಬಹುದು. ಟಿಪ್ಪು ಒಬ್ಬ ಅರಸ ಅಷ್ಟೇ, ಆದರ್ಶ ಅರಸನಲ್ಲ. ಆದರೆ ಕಾಂಗ್ರೆಸ್ ಟಿಪ್ಪುವನ್ನು ಜಾತಿ, ಮತಗಳ ಹೆಸರಿನಲ್ಲಿ ವೈಭವೀಕರಿಸುತ್ತಿದೆ ಎಂದು ಆರೋಪಿಸಿದರು.