Advertisement

ಕಬ್ಬು ಬೆಳೆಯೋರು ನೋಡ್ಕಳ್ರೀ…

09:18 AM Apr 16, 2019 | Hari Prasad |

ಬೇಸಿಗೆಯಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲೇ ಸರಿ. ಈ ಬರ ನಿರ್ವಹಣೆ ಮಾಡುವುದು ಅಂದರೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅಂತ ಅರ್ಥ. ಹೀಗೆ ಮಾಡಿದರೆ, ಇಳುವರಿ ಹೆಚ್ಚಾಗುತ್ತದೆ. ಎಷ್ಟೋ ಸಲ, ನೀರಿನ ಲಭ್ಯತೆಗನುಗುಣವಾಗಿ ಎಷ್ಟು ಎಕರೆಯಲ್ಲಿ ಕಬ್ಬನ್ನು ಬೆಳೆಯಬೇಕು ಅನ್ನೋದನ್ನು ನಿರ್ಧರಿಸಬೇಕು. ಇನ್ನೊಂದು ಬಹುಮುಖ್ಯ ವಿಚಾರ ಏನೆಂದರೆ, ಮಳೆಗಾಲದಲ್ಲಿನ ನೀರಿನ ಪ್ರಮಾಣ ಗಮನಿಸಿ ಕಬ್ಬು ನಾಟಿ ಮಾಡಬಾರದು.

Advertisement

ನಾಟಿ ಮಾಡುವಾಗ
ಕಬ್ಬು ನಾಟಿ ಪೂರ್ವದಲ್ಲಿ ಹಾಗೂ ಕುಳೆ ಕಬ್ಬಿನಲ್ಲಿ ಎಕರೆಗೆ ಚೆನ್ನಾಗಿ ಕಳಿತ 10 ಟನ್‌ ಕೊಟ್ಟಿಗೆ ಗೊಬ್ಬರ, 2 ಟನ್‌ ಭೂಮಿ ಶಕ್ತಿ ಹಾಗೂ 1 ಟನ್‌ ಎರೆಹುಳು ಗೊಬ್ಬರ ಬಳಸಬೇಕು. ನೀರಿನ ಕೊರತೆಯಿರುವ ಪ್ರದೇಶದಲ್ಲಿ, ಪಟ್ಟಾ ಪದ್ಧತಿಯಲ್ಲಿ ಅಂದರೆ 2.55-2.5 ಅಡಿ ಅಥವಾ 3-6-3 ಅಂತರದಲ್ಲಿ ಕಬ್ಬು ನಾಟಿ ಮಾಡಬೇಕು. 2 ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಸುಣ್ಣದ ತಿಳಿ ನೀರಿನಲ್ಲಿ ಕಬ್ಬಿನ ಬೀಜಗಳನ್ನು 10-15 ನಿಮಿಷ ನೆನೆಯಿಸಿ ನಂತರ ಕಬ್ಬು ನಾಟಿ ಮಾಡಬೇಕು.

ನೀರು ಹೀಗೆ
ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು. ಮೊದಲು ನೀರು ಹಾಯಿಸಿದ ಸಾಲು ಬಿಟ್ಟು, ಈ ಹಿಂದೆ ಹಾಯಿಸದೇ ಇರುವ ಸಾಲಿಗೆ ನೀರು ಹಾಯಿಸಬೇಕು. ಕಬ್ಬಿನಲ್ಲಿ ಗಣಿಕೆಯಾಗುವತನಕ (ಮೂರು ತಿಂಗಳು) ಸಾಲುಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆಕುಂಟೆ ಹೊಡೆಯುವುದರಿಂದ ಮಣ್ಣಿನಲ್ಲಿರುವ ತೇವಾಂಶ ಸಂರಕ್ಷಿಸಲ್ಪಡುತ್ತದೆ. ಇದರಿಂದ ನೀರು ಹಾಯಿಸುವ ಅವಧಿಯ ಅಂತರ ಹೆಚ್ಚಿಸಿಕೊಳ್ಳಬಹುದು. ನೀರಾವರಿ ಪದ್ಧತಿಗಿಂತ ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು. ನಾಟಿ ಕಬ್ಬು ಬೆಳೆಯಲ್ಲಿ (5 ರಿಂದ 6 ತಿಂಗಳ ಬೆಳೆಯ ಅವಧಿ) ಸಂಪೂರ್ಣವಾಗಿ ಒಣಗಿದ ಕಬ್ಬಿನ ಕೆಳ ಭಾಗದ ಎಲೆಗಳನ್ನು ಸುಲಿದು ಸಾಲುಗಳ ಮಧ್ಯ ಹೊದಿಕೆ(ಅಚ್ಛಾದನೆ) ಮಾಡುವುದರಿಂದ ಮಣ್ಣಿನಲ್ಲಿರುವ ತೇವಾಂಶ ಕಾಪಾಡಿಕೊಳ್ಳಬಹುದು.

ಕಟಾವಿನ ನಂತರ
ಕಬ್ಬು ಕಟಾವು ಮಾಡಿದ ತಕ್ಷಣ (ಕುಳೆ ಬೆಳೆಯಲ್ಲಿ) ಕಬ್ಬಿನ ರವದಿ ಹಾಗೂ ಸೋಗೆಗಳನ್ನು ಕಬ್ಬಿನ ಒಂದು ಸಾಲು ಬಿಟ್ಟು ಇನ್ನೊಂದು ಸಾಲುಗಳಲ್ಲಿ ಹೊದಿಕೆ (ಅಚ್ಛಾದನೆ) ಮಾಡುವುದರಿಂದ ಶೇ.30 ರಿಂದ 40 ರಷ್ಟು ನೀರು ಉಳಿತಾಯ ಮಾಡಬಹುದು. ನೀರಾವರಿ ಪದ್ದತಿ ಇದ್ದಲ್ಲಿ ರವದಿ ಹೊದಿಕೆ (ಅಚ್ಛಾದನೆ) ಮಾಡಲಾರದ ಸಾಲುಗಳಲ್ಲಿ ಮಾತ್ರ ನೀರನ್ನು ಹಾಯಿಸುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು.

ರವದಿ ನಿರ್ವಹಣೆಗಾಗಿ ಪ್ರತಿ ಎಕರೆಗೆ ಐದು ಕೆ.ಜಿ ರವದಿ ಕಳೆಯುವ ಸೂಕ್ಷ್ಮಾಣು ಜೀವಿಗಳಾದ ಟ್ರೈಕೋಡರ್ಮಾ ಪರತಂತ್ರ ಜೀವಿಗಳನ್ನು ಹತ್ತು ಕೆ.ಜಿ ತಿಪ್ಪೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳಸಬೇಕು. ಇದರಿಂದ ರವದಿ ಬೇಗನೆ ಕಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಜಮೀನಿನಲ್ಲಿ ಸದಾಕಾಲ ತೇವಾಂಶ ಲಭಿಸುತ್ತದೆ. ಇದರಿಂದ ಕಬ್ಬು ಬೆಳೆಯೂ ಆರೋಗ್ಯಕರ ಬೆಳವಣಿಗೆಯನ್ನು ಹೊಂದುತ್ತದೆ.

Advertisement

ಏನೇನು ಹಾಕಬೇಕು?
ಪ್ರತಿ ಲೀಟರ್‌ ನೀರಿನಲ್ಲಿ 25 ಗ್ರಾಂನಂತೆ ಪೋಟ್ಯಾಷ್‌ (ಎಮ್‌ಒಪಿ) ಗೊಬ್ಬರವನ್ನು ಮಿಶ್ರಣ ಮಾಡಿದ ದ್ರಾವಣವನ್ನು ಪ್ರತಿ ಎಕರೆಗೆ 150 ರಿಂದ 250 ಲೀಟರ್‌ನಂತೆೆ ಸಿಂಪರಣೆ ಮಾಡಬೇಕು. ಇದರಿಂದ ಕಬ್ಬಿನ ಎಲೆಗಳಲ್ಲಿನ ರಂಧ್ರಗಳ ಮುಖಾಂತರ ಆವಿಯಾಗುವ ತೇವಾಂಶವನ್ನು ತಡೆಗಟ್ಟಬಹುದಾಗಿದೆ. ಈ ಸಿಂಪರಣಾ ಕ್ರಮವನ್ನು ಮೇಲಿಂದ ಮೇಲೆ ಅನುಸರಿಸುವುದು ಅಪಾಯಕಾರಿ, ಕಾರಣ ಎಲೆಗಳಲ್ಲಿರುವ ಅತ್ಯಂತ ಸೂಕ್ಷ್ಮ ರಂಧ್ರಗಳು ಸಂಪೂರ್ಣ ಮುಚ್ಚುವುದರಿಂದ ಬೆಳೆಗೆ ಉಸಿರಾಟದ ತೊಂದರೆಯಾಗಿ ಬೆಳೆಯು ಒಣಗುವ ಸಂಭವವುಂಟು. ಆದ್ದರಿಂದ ಈ ದ್ರಾವಣವನ್ನು 10 ರಿಂದ 15 ದಿನಕ್ಕೊಮ್ಮೆ ಬೆಳೆಯ ಬೆಳವಣಿಗೆಯನ್ನು ಗಮನಿಸಿ ಸಿಂಪಡಿಸಬೇಕು.

ಸೂಕ್ಷ್ಮವಾತಾವರಣವನ್ನು ಕಲ್ಪಿಸಲು ಬೆಳೆಯ ಕ್ಷೇತ್ರದ ಸುತ್ತಲು ಬದುಗಳ ಮೇಲೆ ಗಾಳಿ ತಡೆಗಟ್ಟುವ ಗಿಡಗಳನ್ನು ಬೆಳೆಸಬೇಕು. ನೀರಿನ ಕೊರತೆಯಲ್ಲಿ ಬೆಳೆಯುವ ಸಾಮರ್ಥ್ಯವುಳ್ಳ ಸಿಓಸಿ 671, ಸಿಓಎಸ್‌ಎನ್‌ಕೆ 0632 ಮತ್ತು ಸಿಓ 94012 ತಳಿಗಳನ್ನು ನಾಟಿ ಮಾಡಬೇಕು.

— ಬಸವರಾಜ ಶಿವಪ್ಪ ಗಿರಗಾಂವಿ

Advertisement

Udayavani is now on Telegram. Click here to join our channel and stay updated with the latest news.

Next