Advertisement

ಕೊಡಗಿನಲ್ಲಿ ಸಾಂಕೇತಿಕ ಟಿಪ್ಪು ಜಯಂತಿ ಆಚರಣೆ

09:48 AM Nov 11, 2018 | |

ಮಡಿಕೇರಿ: ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಡಗಿನ ಮೂರು ತಾಲೂಕುಗಳಲ್ಲಿ ಟಿಪ್ಪು ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಗೈರು ಹಾಜರಾಗಿದ್ದರು. 

Advertisement

ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಆಹ್ವಾನಿತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದ ವೇಳೆ ಜನಪ್ರತಿನಿಧಿಗಳು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪೊಲೀಸರು ಬಂಧಿಸಿದರು. 

ಕಾರ್ಯಕ್ರಮ ಆರಂಭವಾಗುವ ಮೊದಲೇ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಎಂ.ಪಿ. ಸುನಿಲ್‌ ಸುಬ್ರಮಣಿ, ಟಿಪ್ಪು ಜಯಂತಿ ಆಚರಣೆ ಕೊಡಗಿಗೆ ಅಪಮಾನ ಎಂದು ಟೀಕಿಸಿದರು. ಈ ನಡುವೆ ಜಿ.ಪಂ. ಕಾಂಗ್ರೆಸ್‌ ಸದಸ್ಯೆ ಚಂದ್ರಕಲಾ ಅವರನ್ನು ವೇದಿಕೆ ಯಿಂದ ಕೆಳಗಿಳಿಸುವಂತೆ ಬಿಜೆಪಿ ಜನಪ್ರತಿನಿಧಿಗಳು ವಾಗ್ಯುದ್ಧ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಬೇಕಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌, ಕೊಡಗಿಗೆ ಅನ್ಯಾಯ ಮಾಡಿದ ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸುವ ಅಗತ್ಯ ವಿಲ್ಲ. ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಘೋಷಿಸಿದರು.

ಹತ್ತೇ ನಿಮಿಷಗಳಲ್ಲಿ ಮುಗಿದ ಕಾರ್ಯಕ್ರಮ
ಕಾರ್ಯಕ್ರಮ ಕೇವಲ 10 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.  ಈ ಕಾರ್ಯಕ್ರಮಕ್ಕೆ ಬಿಜೆಪಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದಿರುವ ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್‌ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರ ಇಲ್ಲದೆಯೂ ಪ್ರವೇಶ ನೀಡಿದ ಪೊಲೀಸರು, ಬಿಜೆಪಿ ಜನಪ್ರತಿನಿಧಿಗಳಿಗೆ ಆಹ್ವಾನ ಇಲ್ಲ ಎಂಬ ಕಾರಣಕ್ಕೆ ಕೋಟೆಯ ಪ್ರವೇಶ ದ್ವಾರದಲ್ಲೇ ತಡೆದರು.  

174 ಮಂದಿ ಬಂಧನ, ಬಿಡುಗಡೆ 
ಪ್ರತಿಭಟನೆ ನಡೆಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌ ಸಹಿತ ಹಿಂದೂ ಪರ ಸಂಘಟನೆಗಳ ಪ್ರಮುಖರನ್ನು ಪೋಲಿಸರು ಬಂಧಿಸಿದರು. ಒಟ್ಟು 174 ಮಂದಿಯನ್ನು ಪೊಲೀಸರು ಬಂಧಿಸಿ ಅನಂತರ ಬಿಡುಗಡೆ ಮಾಡಿದರು. ಡ್ರೋನ್‌ ಮೂಲಕ ಕಣ್ಗಾವಲು ಇರಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next