ಬೆಂಗಳೂರು: ಟಿಪ್ಪು ಜಯಂತಿ ವಿವಾದಕ್ಕೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ಹೈಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ಮಡಿಕೇರಿಯ ಹೈಸೊದೂÉರು ನಿವಾಸಿ ಕೆ.ಪಿ. ಮಂಜುನಾಥ್ ಅಲಿಯಾಸ್ ಕೆ.ಪಿ. ಮಂಜುನಾಥ್ ಚಿನ್ನಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು 2017ರ ಅ.24ರಂದು ಹೊರಡಿಸಿದ್ದ ಸುತ್ತೋಲೆ ರದ್ದುಪಡಿಸಬೇಕು ಎಂದು ಕೋರಿ ಕೆ.ಪಿ. ಮಂಜುನಾಥ್ ಪಿಐಎಲ್ ಸಲ್ಲಿಸಿದ್ದಾರೆ.
ಗುರುವಾರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪವನಚಂದ್ರ್ ಶೆಟ್ಟಿ ” ಸರ್ಕಾರಿ ಆಡಳಿಯ ತಂತ್ರದ ವತಿಯಿಂದ ಟಿಪ್ಪು ಜಯಂತಿ ಆಚರಿಸಿದ ಸಂದರ್ಭದಲ್ಲಿ ಅರ್ಜಿದಾರರ ತವರು ಜಿಲ್ಲೆ ಕೊಡುಗಿನಲ್ಲಿ ಕೋಮು ಗಲಭೆ ಸಂಭಂಭವಿಸಿದೆ. ಅದರಲ್ಲಿ ಕುಟ್ಟಪ್ಪ ಎಂಬುವರರು ಪ್ರಾಣ ಕಳೆದುಕೊಂಡಿದ್ದಾರೆ. ಜಯಂತಿ ಆಚರಣೆಗೆ ಸರ್ಕಾರ ಜಿಲ್ಲಾ ಕೇಂದ್ರಗಳ ಕಾರ್ಯಕ್ರಮಕ್ಕೆ ತಲಾ 50 ಸಾವಿರ ರೂ. ಹಾಗೂ ತಾಲೂಕು ಕೇಂದ್ರಗಳ ಕಾರ್ಯಕ್ರಮಕ್ಕೆ ತಲಾ 25 ಸಾವಿರ ರೂ. ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಸರ್ಕಾರದ ಬೊಕ್ಕಸದಿಂದ ವ್ಯಯಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿ, ಜನರನ್ನು ಭಯದಲ್ಲಿಟ್ಟು ಟಿಪ್ಪು ಜಯಂತಿ ಆಚರಣೆಯ ಔಚಿತ್ಯವೇನು’ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿಗೆ ಸರ್ಕಾರವು ಇನ್ನು ಆಕ್ಷೇಪಣೆ ಸಲ್ಲಿಸಿಲ್ಲ. ಮೊದಲು ಸರ್ಕಾರ ಆಕ್ಷೇಪಣೆ ಸಲ್ಲಿಸಲಿ ಎಂದರು. ಬಳಿಕ ನಂತರ ಸರ್ಕಾರಿ ವಕೀಲರನ್ನು ಉದ್ದೇಶಿಸಿ, 2017ರಲ್ಲೇ ಅರ್ಜಿ ಸಲ್ಲಿಕೆಯಾಗಿದ್ದರೂ, ಇಲ್ಲಿತನಕ ಆಕ್ಷೇಪಣೆ ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿ, ಮೂರು ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.