ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುಸುಲ್ತಾನ್ ಕನ್ನಡ ನಾಡಿಗೆ ಅಪಾರ ಕೀರ್ತಿ ತಂದ ವ್ಯಕ್ತಿಯಾಗಿದ್ದಾರೆ. ತಮ್ಮ ಆಳ್ವಿಕೆಯಲ್ಲಿ ಹಿಂದು ದೇವಾಲಯಗಳಿಗೆ ನೀಡಿರುವಷ್ಟು ದೇಣಿಗೆ ಬೇರೆ ಯಾವುದೇ ರಾಜರೂ ನೀಡಿಲ್ಲ. ತಮ್ಮ ಸ್ವಾರ್ಥ ರಾಜಕೀಯ ಸಾಧನೆಗೆ ಬಿಜೆಪಿ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಆರೋಪಿಸಿದರು.
ನಗರದ ಮಾರುಕಟ್ಟೆ ಸಮೀಪ ಇರುವ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ನಡೆದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಿಟೀಷರ ದಾಸ್ಯದಿಂದ ಮುಕ್ತಿಪಡೆಯಲು ತಮ್ಮ ಪ್ರಾಣ ಲೆಕ್ಕಿಸದೇ ಹೋರಾಟ ಮಾಡಿದ ತ್ಯಾಗಮಯಿ, ಸಹೃದಯಿ ಟಿಪ್ಪು ಸುಲ್ತಾನ್ ಎಂದು ಹೇಳಿದರು.
ಇತಿಹಾಸ ತಿರುಚುವ ಕೆಲಸ: ಜಾತ್ಯಾತೀತ ತತ್ವದಡಿ ರೂಪುಗೊಂಡಿರುವ ದೇಶದಲ್ಲಿ ಪರಸ್ಪರ ಸಾಮರಸ್ಯದೊಂದಿಗೆ ಜೀವನ ನಡೆಸುವುದು ಅಗತ್ಯವಾಗಿದೆ. ಪ್ರಸ್ತುತದ ದಿನಗಳಲ್ಲಿ ಟಿಪ್ಪುಸುಲ್ತಾನ್ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಕೇಳಿ ಬರುತ್ತಿರುವುದು ನೋವಿನ ಸಂಗತಿ ಎಂದರು. ದೇಶದಲ್ಲಿ ನೈಜವಾದ ಇತಿಹಾಸವನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಚಾಣಕ್ಯ ನೀತಿಗಳಿಂದ ಅಪ್ರತಿಮ ಧೈರ್ಯ ಸಾಹಸಗಳನ್ನು ಪ್ರದರ್ಶಿಸಿದ ಟಿಪ್ಪು ಸುಲ್ತಾನರ ಹೋರಾಟಕ್ಕೆ ಇತರೆ ರಾಜರು ಸಹಕಾರ ನೀಡಿದ್ದಲ್ಲಿ ದೇಶವು ಶತಮಾನಗಳ ಕಾಲ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತಿರಲಿಲ್ಲ ಎಂದರು. ಟಿಪ್ಪು ಸುಲ್ತಾನ್ ಆದರ್ಶ, ಅವರ ಹೋರಾಟದ ದಿಟ್ಟತನವನ್ನು ಇಂದಿನ ವಿದ್ಯಾರ್ಥಿಗಳು, ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ಅವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಅವಿಸ್ಮರಣೀಯ ಎಂದರು.
ರೇಷ್ಮೆ ಪರಿಚಯ: ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ನಂದಿ ಎಂ.ಎಂ.ಬಾಷಾ ಮಾತನಾಡಿ, ಇಡೀ ದೇಶಕ್ಕೆ ಮೊದಲ ಬಾರಿಗೆ ರೇಷ್ಮೆ ಪರಿಚಯಿಸಿದವರು ಟಿಪ್ಪು ಸುಲ್ತಾನ್. ವಿದೇಶಗಳಿಂದ ಹೊಸ ಮಾದರಿಯ ಸಸ್ಯಗಳನ್ನು ನಾಡಿಗೆ ಪರಿಚಯ ಮಾಡಿಸಿ ತೋಟಗಾರಿಕೆ ಪ್ರಾರಂಭಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ. ಟಿಪ್ಪುರಂತಹ ಮಹಾನ್ ವೀರ ಕನ್ನಡ ನಾಡಿನಲ್ಲಿ ಹುಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಅಪ್ಸರ್‌ಪಾಷಾ, ಜಿಲ್ಲಾ ಸಂಯೋಜಕ ಮುನಿಕೃಷ್ಣಪ್ಪ, ಹಿರಿಯ ಮುಖಂಡರಾದ ದ್ಯಾವಪ್ಪ, ಮೂರ್ತಿ, ಗಂಗಾಧರಪ್ಪ, ಪೆದ್ದನ್ನ, ನಗರಸಭಾ ಮಾಜಿ ಸದಸ್ಯ ಎನ್.ಶ್ರೀನಿವಾಸ್, ದಸಂಸ ಜಿಲ್ಲಾ ಸಂಚಾಲಕ ಆನಂದ್ ಉಪಸ್ಥಿತರಿದ್ದರು.