ತಿ.ನರಸೀಪುರ: ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ಆಂಗ್ಲೋ-ಮೈಸೂರು ಯುದ್ಧವನ್ನು ಆರಂಭಿಸಿದ ಹಜರತ್ ಟಿಪ್ಪು ಸುಲ್ತಾನ್ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಡಾ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು.
ತಾಲೂಕು ಕಚೇರಿಯಲ್ಲಿ ನಡೆದ ಹಜರತ್ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ದೊರೆಯಾಗಿದ್ದ ಟಿಪ್ಪು ವೀರನಂತೆ ಕೇವಲ 49 ವರ್ಷ ಬದುಕಿ ಬ್ರಿಟೀಷರನ್ನು ದೇಶದಿಂದ ತೊಲಗಿಸಲು ನಾಲ್ಕು ಯುದ್ಧಗಳನ್ನು ಮಾಡಿದ್ದರು.
ಸ್ವಾರ್ಥಕ್ಕಾಗಿ ಏನನ್ನೂ ಮಾಡಿಕೊಳ್ಳದೆ ರಾಜ್ಯದಲ್ಲಿನ ಜನರಿಗಾಗಿ ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ತಾನೊಬ್ಬ ರಾಷೀಯ ವಾದಿ ಎಂಬುದನ್ನು ಸಾಬೀತು ಪಡಿಸಿದರು ಎಂದರು. ರಾಜಧರ್ಮ ಮತ್ತು ನೀತಿಗೆ ವಿರುದ್ಧವಾಗಿ ನಡೆದುಕೊಂಡವರನ್ನು ಶಿಕ್ಷಿಸಿದ್ದನ್ನೆ ದೊಡ್ಡದು ಮಾಡಿ ಟಿಪ್ಪು ಕ್ರೂರಿ ಎಂಬಂತೆ ಬಿಂಬಿಸಲಾಗುತ್ತಿದೆ.
ಶೃಂಗೇರಿ ಅನ್ಯರ ದಾಳಿಗೊಳಗಾದಾಗ ಅಲ್ಲಿನ ಮಠಕ್ಕೆ ರಕ್ಷಣೆ ಕೊಟ್ಟು, ನದಿಗೆ ಬೀಸಾಡಿದ ಶಾರದಾಂಬೆಯನ್ನು ಮೇಲಕ್ಕೆ ತಂದು ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಆರ್ಥಿಕ ನೆರವು ನೀಡಿದ್ದರೂ ಆತನನ್ನು ಹಿಂದು ವಿರೋಧಿ ಎಂಬಂತೆ ಇತಿಹಾಸವನ್ನೇ ತಪ್ಪಾಗಿ ಅರ್ಥೈಸುವ ಕೆಲಸ ರಾಜಕೀಯ ದುರುದ್ದೇಶದಿಂದ ನಡೆಯುತ್ತಿದೆ.
ಸ್ವಾತಂತ್ರಾ ನಂತರ ದೇಶದಲ್ಲಿ ಗಣ್ಯರು ಮಾಡಿದ್ದ ಹೋರಾಟಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿದ್ದರು ಎಂದು ತಿಳಿಸಿದರು. ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಅಶ್ವಿನ್‌ಕುಮಾರ್, ಜಿಪಂ ಸದಸ್ಯರಾದ ಮಂಜುನಾಥನ್, ಜಯಪಾಲಭರಣಿ, ಸಾಜಿದ್ ಅಹಮದ್, ರತ್ನರಾಜ್, ತಹಶೀಲ್ದಾರ್ ಪರಮೇಶ್, ಇಒ ಡಾ.ನಂಜೇಶ್ ಇತರರಿದ್ದರು.