ಶಿರಸಿ: ಟಿಪ್ಪು ಸುಲ್ತಾನ್ ರಣ ಹೇಡಿಯಲ್ಲ. ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಪಾದಿಸಿದರು.
ಬುಧವಾರ ನಗರದಲ್ಲಿ ಮಾತನಾಡಿ, ಗೋಡ್ಸೆ ಸಂತತಿಯನ್ನು ಸೋಲಿಸುವುದೇ ಕಾಂಗ್ರೆಸ್ ಗುರಿ ಎಂದೂ ಸಮರ್ಥಿಸಿ ಬಿಜೆಪಿ ವಿರುದ್ಧ ಹರಿಯಾಯ್ದರು.
ಮಹಾತ್ಮಾ ಗಾಂಧಿ ಅವರನ್ನು ಕೊಂದ ಪಕ್ಷ ಬಿಜೆಪಿ. ಭಯೋತ್ಪಾದನೆ ಹುಟ್ಟಿದ್ದೇ ಬಿಜೆಪಿಯ ಮೂಲದಿಂದ ಎಂದು ಆರ್ ಎಸ್ ಎಸ್ ವಿರುದ್ಧವೂ ಪರೋಕ್ಷ ವಾಗ್ದಾಳಿ ಮಾಡಿ, ಬ್ರಿಟೀಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು ಎಂದು ಹೇಳಲೇ ಬೇಕಲ್ಲ ಎಂದೂ ಲೇವಡಿ ಮಾಡಿದರು.
ಬಿಜೆಪಿ ರಾಮನ ಗುತ್ತಿಗೆ ಪಡೆದಂತೆ ಮಾತನಾಡುತ್ತಿದೆ.ಮಹಾತ್ಮಗಾಂಧಿ ಅವರ ರಾಮ ರಾಜ್ಯ ಕನಸೇ ಬೇರೆ. ಬಿಜೆಪಿ ರಾಮ ರಾಜ್ಯವೇ ಬೇರೆ. ಭಯೋತ್ಪಾದಕ ಬೆಂಬಲ ಬಿಜೆಪಿ ನೀಡುತ್ತಿದೆ ಎಂದರು.
ನೆರೆಗೆ, ಕರೋನಾ ನೋವಿಗೆ ಬಾರದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕೊನೇ ಪಕ್ಷ ವೈಮಾನಿಕ ಸಮೀಕ್ಷೆಯೂ ಮಾಡದವರು ಇಂದು ಪಾಲಿಟಕಲ್ ಟೂರಿಸಂ ಹೆಸರಿನಲ್ಲಿ ಬಿಜೆಪಿ ಮತಕ್ಕಾಗಿ ಓಡಾಟ ಮಾಡುತ್ತಿದ್ದಾರೆ ಎಂದರು.
ಪ್ರಜಾ ಧ್ವನಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ದುರಾಡಳಿತ, ದೌರ್ಜನ್ಯವನ್ನು ಜನ ಸಾಮಾನ್ಯರಿಗೆ ತಿಳಿಸುತ್ತಿದೆ. ಬೆಲೆ ಏರಿಕೆ ಆಗಿದೆ. ರಾಜ್ಯದಲ್ಲಿ ಸುರಕ್ಷತೆ ಇಲ್ಲ, ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮೋದಿ ಅವರಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಸಿದ್ದರಾಮಯ್ಯ ಅವರು ವಿಧಾನ ಸಭೆಗೆ ಸ್ಪರ್ಧಿಸಲು ಬಾದಾಮಿ, ಕೋಲಾರ ಎಲ್ಲಿ ಎಂಬ ಗೊಂದಲ ಇಲ್ಲ. ಕೋಲಾರದಲ್ಲಿ ಪಕ್ಷದ ವರಿಷ್ಠರ ಒಪ್ಪಿಗೆ ಸಿಕ್ಕರೆ ಸ್ಪರ್ಧಿಸಲಿದ್ದಾರೆ ಎಂದೂ ಹೇಳಿದ್ದಾರೆ ಎಂದರು.