ಬೆಳಗಾವಿ: ಭಾರೀ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಬೆಳಗಾವಿ-ಬಾಗಲಕೋಟೆ ರಸ್ತೆಯ ಪಂತ ಬಾಳೇಕುಂದ್ರಿಯ ಪಂತ ನಗರ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಸುಳೇಭಾವಿ ಗ್ರಾಮದ ಸೋಮಯ್ಯ ಪ್ರಭು ಖವಾಶಿ (22) ಹಾಗೂ ಮೂಲತಃ ಕಿತ್ತೂರು ತಾಲೂಕಿನ ಶಿವನೂರು ಗ್ರಾಮದ ಸದ್ಯ ಸುಳೇಭಾವಿ ನಿವಾಸಿ ವಿಠ್ಠಲ ಗಣಪತಿ ಡವಳಿ(22) ಎಂಬ ಇಬ್ಬರು ಸ್ನೇಹಿತರು ಮೃತಪಟ್ಡಿದ್ದಾರೆ.
ಈ ಯುವಕರು ಬೆಳಗಾವಿಯಿಂದ ಸುಳೇಭಾವಿ ಕಡೆಗೆ ಬರುವಾಗ ಎದುರಿನಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಟಿಪ್ಪರ್ ಕೆಳಗೆ ಸಿಕ್ಕಿ ಹಾಕಿಕೊಂಡಿತ್ತು. ವಿಠ್ಠಲ ಡವಳಿ ಸ್ಥಳದಲ್ಲಿಯೇ ಮೃತಪ್ಟಿದ್ದಾನೆ. ಇನ್ನೊಬ್ಬ ಯುವಕ ಸೋಮಯ್ಯ ಗಂಭೀರ ಗಾಯಗೊಂಡಿದ್ದನು. ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಿದರೂ ರಾತ್ರಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ:6 ಕೋಟಿ ವ್ಯಯಿಸಿ ವಿವಾಹ, 55 ಲಕ್ಷ ರೂ. ಮೌಲ್ಯದ ಕಾರು ಕೊಟ್ಟರೂ ಪತಿಯಿಂದ ವರದಕ್ಷಿಣೆ ಕಿರುಕುಳ
ಇಬ್ಬರು ಯುವಕರ ಸಾವಿನಿಂದ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆದಿದೆ. ಮಾರೀಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.