ಸಿರಿಗೆರೆ/ಚಿಕ್ಕಜಾಜೂರು: ಸಿರಿಗೆರೆ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಸ್ವಾಮೀಜಿಗಳು ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ಬೆಳಗ್ಗೆ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಶ್ರೀಗಳು ಕಾರಿನಲ್ಲಿ ಭದ್ರಾವತಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತ ವಿಷಯ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಜನರನ್ನು ಸಮಾಧಾನಪಡಿಸಿದ ಶ್ರೀಗಳು, ಭದ್ರಾವತಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೇರೊಂದು ವಾಹನದಲ್ಲಿ ತೆರಳಿದರು. ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನ ಅದಿರು ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಿಗೆರೆ ಶ್ರೀ ಭೇಟಿ: ಸಿರಿಗೆರೆ ತರಳಬಾಳು ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗೃಹ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿರಿಗೆರೆ ಶ್ರೀಗಳು, ‘ಸಾಸಲು ಗ್ರಾಮದ ಬಳಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ಭಾಗದಲ್ಲಿ ಸಂಚರಿಸುವ ಅದಿರು ಲಾರಿಗಳಿಗೆ ಸಾರ್ವಜನಿಕ ರಸ್ತೆ ಸಂಚಾರ ನಿಷೇಧಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಭಕ್ತರು ಆತಂಕಕ್ಕೆ ಒಳಗಾಗುವುದು ಬೇಡ. ನಾವು ಯಾವಾಗಲೂ ಬೆಲ್ಟ್ ಧರಿಸಿ ಪ್ರಯಾಣಿಸುತ್ತೇವೆ. ಅಲ್ಲದೆ ನಮ್ಮ ಭಕ್ತರಿಗೂ ಕೂಡ ಬೆಲ್ಟ್ ಧರಿಸಿ ಪ್ರಯಾಣ ಮಾಡುವಂತೆ ತಿಳಿ ಹೇಳುತ್ತಿರುತ್ತೇವೆ. ನಮಗಾಗಲಿ, ಚಾಲಕನಿಗಾಗಲಿ ಯಾವುದೇ ತೊಂದರೆಯಾಗಿಲ್ಲ. ದೈವಬಲದಿಂದ ನಾವು ಚೆನ್ನಾಗಿಯೇ ಇದ್ದೇವೆ. ● ಡಾ| ಪಂಡಿತಾರಾಧ್ಯ ಶ್ರೀಗಳು