Advertisement

ವರ್ಷಾಂತ್ಯದೊಳಗೆ ನಿವಾಸಿಗಳಿಗೆ ಹಕ್ಕು ಪತ್ರ

06:35 PM Mar 03, 2021 | Team Udayavani |

ಚಿತ್ರದುರ್ಗ: ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಈ ವರ್ಷಾಂತ್ಯದ ವೇಳೆಗೆ ನಗರದ ಸುಮಾರು 4849 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ವರ್ಷಗಳಿಂದ ಹಕ್ಕುಪತ್ರಕ್ಕೆ ಮನವಿ ಮಾಡುತ್ತಿದ್ದರು. ಆದರೆ, ಈಗ ಆ ಬೇಡಿಕೆ ಈಡೇರುವ ಸಮಯ ಬಂದಿದೆ ಎಂದರು. ಚಿತ್ರದುರ್ಗ ನಗರದಲ್ಲಿ 38 ಘೋಷಿತ ಕೊಳೆಗೇರಿಗಳಿದ್ದು, ಇದರಲ್ಲಿ 22 ಕೊಳೆಗೇರಿಗಳ 95.26 ಎಕರೆ ಪ್ರದೇಶದ ಅಂದಾಜು 4849 ಕುಟುಂಬಗಳಿಗೆ ಹಕ್ಕುಪತ್ರ ದೊರೆಯಲಿದೆ. ಇಷ್ಟೂ ಕುಟುಂಬಗಳಲ್ಲಿ ಸುಮಾರು 35 ರಿಂದ 40 ಸಾವಿರ ಜನಸಂಖ್ಯೆ ಇರಬಹುದು ಎಂದು ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳಿಗೆ ಮೀರದಂತೆ ಜಾಗ ಗುರುತಿಸಿ, ಇತರೆ ಸಮುದಾಯಗಳಿಗೆ 4 ಸಾವಿರ, ಪರಿಶಿಷ್ಟ ಜಾತಿ, ಪಂಗಡ ಹಾಗೂ ವಿಕಲಚೇತನರಿಗೆ 2 ಸಾವಿರ ರೂ. ಶುಲ್ಕ ಪಾವತಿಸಿಕೊಂಡು ಇರುವ ಜಾಗವನ್ನು ಕ್ರಮಬದ್ಧಗೊಳಿಸಲಾಗುವುದು ಎಂದರು.

ನಗರಸಭೆ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡಿಕೊಂಡು, ಚೆಕ್‌ಬಂದಿ ಮತ್ತಿತರೆ ದಾಖಲಾತಿ ಸಿದ್ಧಪಡಿಸಿ ಮುಂದಿನ 8 ತಿಂಗಳಲ್ಲಿ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.

ಬರಗೇರಿ ಭೋವಿ ಕಾಲೋನಿ, ಸಿಹಿ ನೀರು ಹೊಂಡ, ಹಿಮ್ಮತ್‌ನಗರ, ಜಿ.ಎಚ್‌. ತಿಪ್ಪಾರೆಡ್ಡಿ ನಗರ, ವಿಜಯನಗರ, ಯೂನಿಯನ್‌ ಟಾಕೀಸ್‌ ಹಿಂಭಾಗ, ಜೈನ್‌ ಕಾಲೋನಿಯ ಕೊಳೆಗೇರಿಗಳ ಜಮೀನು ವಿವಾದಗಳಿದ್ದು, ಸದ್ಯಕ್ಕೆ ಇಲ್ಲಿ ಹಕ್ಕುಪತ್ರ ನೀಡುತ್ತಿಲ್ಲ. ಅಗಳೇರಿ, ಕಾಮನಬಾವಿ ಕೊಳೆಗೇರಿಗಳು ಪಹಣಿಯಲ್ಲಿ ಅರಣ್ಯ ಪ್ರದೇಶ ಎಂದು ನಮೂದಾಗಿವೆ. ಇದನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.

Advertisement

7252 ಅರ್ಹ ಫಲಾನುಭವಿಗಳ ಪತ್ತೆ: ನಗರಸಭೆ ವ್ಯಾಪ್ತಿಯ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ವಸತಿ ನಿವೇಶನ ರಹಿತರಿಗೆ ಜಿ+2 ಮಾದರಿಯಲ್ಲಿ ಮನೆಗಳನ್ನು ಒದಗಿಸಲು ಅರ್ಜಿ ಆಹ್ವಾನಿಸಿದಾಗ 13500 ಅರ್ಜಿಗಳು ಬಂದಿದ್ದವು. ಇದರಲ್ಲಿ ಅರ್ಹರನ್ನು ಗುರುತಿಸಿದ್ದು, 7252 ಫಲಾನುಭವಿಗಳು ಪತ್ತೆಯಾಗಿದ್ದಾರೆ. ಇವರಿಗೆ ವಸತಿ ಕಲ್ಪಿಸಲು ಆಶ್ರಯ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದರು.

ಮೊದಲ ಹಂತದಲ್ಲಿ ಮೇಗಳಹಳ್ಳಿಯ ರಿ.ಸ.ನಂ 22 ರಲ್ಲಿ 15.2 ಎಕರೆಯಲ್ಲಿ ಜಿ+2 ಮಾದರಿಯಲ್ಲಿ 1001 ಮನೆ ನಿರ್ಮಾಣ ಮಾಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 6.30 ಲಕ್ಷ ರೂ. ನಿಗ ದಿ ಮಾಡಲಾಗಿದೆ. ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 3.50 ಲಕ್ಷ ರೂ. ಸಹಾಯಧನ, 2.80 ಲಕ್ಷ ರೂ. ಬ್ಯಾಂಕ್‌ ಸಾಲವಾಗಿ ನೀಡಲಾಗುವುದು. ಇತರೆ ವರ್ಗದ ಫಲಾನುಭವಿಗಳಿಗೆ ಸರ್ಕಾರದಿಂದ 2.70 ಲಕ್ಷ ರೂ. ಸಹಾಯ ಧನ, ಉಳಿಕೆ 3.60 ಲಕ್ಷ ರೂ. ಬ್ಯಾಂಕ್‌ ಸಾಲ ದೊರೆಯಲಿದೆ. ಪ್ರತಿ ಫಲಾನುಭವಿ ಆರಂಭದಲ್ಲಿ ವೈಯಕ್ತಿಕ ಉಳಿತಾಯ ಖಾತೆಯಲ್ಲಿ 10 ಸಾವಿರ ರೂ. ಠೇವಣಿಯಾಗಿಡಬೇಕು. ಬ್ಯಾಂಕ್‌ ಸಾಲವನ್ನು ಇಎಂಐ ಮೂಲಕ ಪಾವತಿಸಬೇಕು ಎಂದರು.

ಈ ಯೋಜನೆಗಾಗಿ ಮೊದಲ ಹಂತದಲ್ಲಿ ನಗರಸಭೆ ವ್ಯಾಪ್ತಿಯ 1176 ಫಲಾನುಭವಿಗಳನ್ನು ಗುರುತಿಸಿದ್ದು, ಎಸ್ಸಿ 334, ಎಸ್ಟಿ 134, ಅಲ್ಪ ಸಂಖ್ಯಾತ 125 ಹಾಗೂ ಸಾಮಾನ್ಯ ವರ್ಗದ 583 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದೇ ರೀತಿ ಮದಕರಿಪುರ ಬಳಿಯೂ 8 ಎಕರೆ ಜಾಗ ಗುರುತಿಸಿದ್ದು, ಜಿ+2 ಮಾದರಿಯಲ್ಲಿ 600 ಮನೆ ನಿರ್ಮಿಸಲು ಡಿಪಿಆರ್‌ ತಯಾರಿಗೆ ಟೆಂಡರ್‌ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪೌರಾಯುಕ್ತ ಹನುಮಂತರಾಜು, ಇಂಜಿನಿಯರ್‌ಗಳಾದ ಸತೀಶ್‌  ರೆಡ್ಡಿ, ನಾರಾಯಣರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next