ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಸಕ ತಿಪ್ಪೇಸ್ವಾಮಿಯವರಿಗೂ ಅವಕಾಶ ಕಲ್ಪಿಸಿಕೊಡಲಾಗುವುದು. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅವರನ್ನು ಮನೆಗೆ ಕರೆಸಿ ಮಾತುಕತೆ ನಡೆಸಲಾಗುವುದು ಎಂದು ಸಂಸದ ಬಿ. ಶ್ರೀರಾಮುಲು ಹೇಳಿದರು.
ನಗರದ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಕಳೆದ 2013ರ ಚುನಾವಣೆಯಲ್ಲಿ ನಮ್ಮ (ಬಿಎಸ್‌ಆರ್) ಪಕ್ಷದಿಂದಲೇ ಸ್ಪರ್ಧಿಸಿ ಶಾಸಕರಾಗಿದ್ದರು. ಹೀಗಾಗಿ ಕೂಡಲೇ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದರು. ಅವರು ನನಗೆ ಹಲವು ವರ್ಷಗಳಿಂದ ಚಿರಪರಿಚಿತ. ಕಳೆದ ಪರಿವರ್ತನಾ ಯಾತ್ರೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೇಳಿ ನಾನೇ ಟಿಕೆಟ್ ಘೋಷಣೆ ಮಾಡಿಸಿದ್ದೆ. ಅವರು ಯಾವುದೇ ಕಾರಣಕ್ಕೂ ಗಾಬರಿಯಾಗುವುದು ಬೇಡ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಹ ಬಿ.ಎಸ್. ಯಡಿಯೂರಪ್ಪ ಹೊರತುಪಡಿಸಿ ಸಂಸದರಿಗೆ ಯಾರಿಗೂ ಟಿಕೆಟ್ ಇಲ್ಲ ಎಂದು ಹೇಳಿದ್ದರಿಂದ ನಾನು ಸಹ ಎಲ್ಲಿಯೂ ಸ್ಪರ್ಧಿಸುವುದಾಗಿ ಹೇಳಿರಲಿಲ್ಲ. ಆದರೆ, ರಾಜಕೀಯ ಲೆಕ್ಕಾಚಾರ ಪ್ರಕಾರ ರಾಜ್ಯದ 15 ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ರಾಮುಲು ಅವರಿಗೂ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೇಟ್ ಘೋಷಿಸಲಾಗಿದೆ. ಇದರಿಂದ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೂ ಅನುಕೂಲವಾಗಲಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲೂ ರಾಮುಲು ನಿಲ್ಲಬೇಕು ಎನ್ನುವ ಒತ್ತಾಯವಿದೆ. ಆದರೆ ಪಕ್ಷ ನಿರ್ಣಯ ಕೈಗೊಂಡು ಎರಡು ಕಡೆ ನಿಲ್ಲುವಂತೆ ಸೂಚಿಸಿದರೆ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದರು.
ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕ್ಕೀರಪ್ಪ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ, ಪಾಲಿಕೆ ಸದಸ್ಯರಾದ ಎಸ್. ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಕೆ.ಎ. ರಾಮಲಿಂಗಪ್ಪ, ಮುರಹರ ಗೌಡ, ಕೆ. ಶಶಿಕಲಾ, ಎಂ. ಶಿವರುದ್ರಪ್ಪ ಇತರರು ಇದ್ದರು.