Advertisement

ಗೋಲ್ಡನ್‌ ಅವರ್‌ನಲ್ಲಿ ಸಕಾಲಿಕ ಚಿಕಿತ್ಸೆ,ಇಂಜೆಕ್ಷನ್ ನೀಡುವುದರಿಂದ ಜೀವ ಉಳಿಸುವಲ್ಲಿ ಯಶಸ್ವಿ

12:49 AM Jan 02, 2025 | Team Udayavani |

ಮಂಗಳೂರು: ಅವರು ಬಂಟ್ವಾಳದ ಆಟೊ ಚಾಲಕ.. ಎದೆನೋವು ಕಾಣಿಸಿಕೊಂಡಾಗ ನೇರ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಬಂದರು. ಅಲ್ಲಿದ್ದ ವೈದ್ಯರು ವಿಷಯ ತಿಳಿದು ಇಸಿಜಿ ಮಾಡಿ, ಅದರ ಡೇಟಾವನ್ನು ಬೆಂಗಳೂರಿಗೆ ರವಾನಿಸಿದರು. ಅಲ್ಲಿನ ಸೂಚನೆ ಮೇರೆಗೆ ಹೇಳಲಾದ ಇಂಜೆಕ್ಷನ್‌ ಅನ್ನು ಆಟೊ ಚಾಲಕರಿಗೆ ನೀಡಿ ಅವರನ್ನು ಅಪಾಯದಿಂದ ಪಾರು ಮಾಡಲಾಯಿತು. ಅಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನು ಜಿಲ್ಲಾ ಕೇಂದ್ರದ ಹಬ್‌ ಆಸ್ಪತ್ರೆಗೆ ಕಳುಹಿಸಲಾಯಿತು.

Advertisement

ಸುಳ್ಯದಲ್ಲಿನ ಕೃಷಿಕರೊಬ್ಬರು ತಾಲೂಕು ಆಸ್ಪತ್ರೆಗೆ ಎದೆನೋವೆಂದು ಧಾವಿಸಿ ಬಂದರು. ಅವರ ಇಸಿಜಿ ನಡೆಸಿ, ಹೃದಯ ಸಮಸ್ಯೆ ಅರಿತು ಅವರಿಗೂ ಇಂಜೆಕ್ಷನ್‌ ನೀಡಲಾಯಿತು. ಸುಮಾರು 1.5 ಗಂಟೆಯಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನೂ ಹಬ್‌ ಆಸ್ಪತ್ರೆಗೆ ಕಳುಹಿಸಲಾಯಿತು. ಇವರಿಬ್ಬರೂ ಈಗ ಆರೋಗ್ಯವಾಗಿದ್ದಾರೆ.

ಇದು ಸದ್ಯ ಹೃದ್ರೋಗಕ್ಕೆ ಸಂಬಂಧಿಸಿ ಸರಕಾರ ಜಾರಿಗೊಳಿಸಿದ ಪುನೀತ್‌ ಹೃದಯಜ್ಯೋತಿ ಯೋಜನೆಯಿಂದ ಆಗಿರುವ ಬದಲಾವಣೆ. ಹಿಂದೆ ಹೃದಯನೋವಿನಿಂದ ಬಳಲುತ್ತಿದ್ದವರು ಗ್ರಾಮೀಣ ಭಾಗದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದರೆ ಅಲ್ಲಿ ಅವರ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಸಂಪನ್ಮೂಲ ಇರುತ್ತಿರಲಿಲ್ಲ. ಹಾಗಾಗಿ ದೊಡ್ಡ ಆಸ್ಪತ್ರೆಗಳಿಗೆ ತಲುಪುವಾಗ ಸರಾಸರಿ 2 ಗಂಟೆ ತಗಲುತ್ತಿತ್ತು. ಹಾಗಾಗಿ “ಗೋಲ್ಡನ್‌ ಅವರ್‌’ (ಎದೆನೋವು ಕಾಣಿಸಿಕೊಂಡ ಮೊದಲ ಅರ್ಧ ಗಂಟೆ)ನಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ರೋಗಿಗಳು ಪ್ರಾಣ ತೆರಬೇಕಾದ ಪರಿಸ್ಥಿತಿ ಇತ್ತು.

ಆದರೆ “ಅಪ್ಪು’ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನಾನಂತರ ಸರಕಾರ ಅವರದೇ ಹೆಸರಲ್ಲಿ ಹೃದಯಜ್ಯೋತಿ ಯೋಜನೆ ಜಾರಿಗೆ ತಂದಿದೆ. ಮೊದಲ ಹಂತದಲ್ಲಿ 16 ಜಿಲ್ಲೆ ಹಾಗೂ ಎರಡನೇ ಹಂತದಲ್ಲಿ 15 ಜಿಲ್ಲೆಗಳನ್ನು ಸೇರಿಸಲಾಗಿದೆ.

ಎರಡನೇ ಹಂತದಲ್ಲಿ ಸೇರ್ಪಡೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಯೋಜನೆ ಜಾರಿಗೊಂಡಿದೆ. ಪುತ್ತೂರು ತಾಲೂಕು ಇನ್ನು ಕೆಲವೇ ತಿಂಗಳಲ್ಲಿ ಸೇರ್ಪಡೆಯಾಗಲಿದೆ. ಉಳಿದ ಎಲ್ಲ ತಾಲೂಕು ಸೇರಿದಂತೆ 226ರಷ್ಟು ಸ್ಟೆಮಿ ಕ್ರಿಟಿಕಲ್‌ (ಎಸ್‌.ಟಿ.ಎಲೆವೇಶನ್‌ ಮಯೊಕಾರ್ಡಿಯಲ್‌ ಇನ್‌ಫಾಷ್ಕìನ್‌ ಅಥವಾ ಹೃದಯಾಘಾತ) ಕೇಸ್‌ ವಿವಿಧ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಂದಿದೆ.

Advertisement

ಹಬ್‌ ಮತ್ತು ಸ್ಪೋಕ್‌ ಮಾದರಿ
ಚಕ್ರದ ಕಡ್ಡಿ ಮತ್ತು ಕೇಂದ್ರ (ಹಬ್‌ ಮತ್ತು ಸ್ಪೋಕ್‌) ಮಾದರಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಬೆಂಗಳೂರು ಮುಖ್ಯ ಹಬ್‌ ಕೇಂದ್ರ. ಪ್ರತಿ ಜಿಲ್ಲೆಯಲ್ಲಿ ತಾಲೂಕು ಆಸ್ಪತ್ರೆಗಳನ್ನುಸ್ಪೋಕ್‌ ಆಗಿ ಹಾಗೂ ಒಂದು ಖಾಸಗಿ ಸುಸಜ್ಜಿತ ಆಸ್ಪತ್ರೆಯನ್ನು ಜಿಲ್ಲಾ ಹಬ್‌ ಆಗಿ ಮಾಡಲಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಯೇನಪೊಯ ಆಸ್ಪತ್ರೆ ಮತ್ತು ಉಡುಪಿ ಜಿಲ್ಲೆಗೆ ಮಣಿಪಾಲ ಕೆಎಂಸಿ ಹಬ್‌ ಆಸ್ಪತ್ರೆಗಳು. ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಜೀವ ರಕ್ಷಣ ಪ್ರಕ್ರಿಯೆ ಬಳಿಕ ಅವರನ್ನು ಹಬ್‌ ಆಸ್ಪತ್ರೆಗಳಿಗೆ ಮುಂದಿನ ಚಿಕಿತ್ಸೆಗೆ ಕೊಂಡೊಯ್ಯಲಾಗುತ್ತದೆ.

ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಇದೆ. ಪ್ರಕರಣದ ಗಂಭೀರತೆ ಪರಿಗಣಿಸಿ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

ಹೃದಯ ಸಂಬಂಧಿ ಸಮಸ್ಯೆಯೊಂದಿಗೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ಸಕಾಲಕ್ಕೆ ಸಿಗುವುದು ಒಂದೆಡೆ ಅನುಕೂಲವಾಗಿದ್ದರೆ, ಮತ್ತೂಂದೆಡೆೆ ಈ ಯೋಜನೆಯಡಿ ತತ್‌ಕ್ಷಣ ಜೀವ ಉಳಿಸಲು ನೀಡುವ ಒಂದು ಇಂಜೆಕ್ಷನ್‌. ಇದರ ಬೆಲೆ 28 ಸಾವಿರ ರೂ. ಗಳಿಂದ 40 ಸಾವಿರ ರೂ. ಗಳವರೆಗೆ ಇದ್ದು, ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ರೋಗಿಗಳು ಚೇತರಿಸಿಕೊಳ್ಳುತ್ತಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಮಂದಿಗೆ ಈ ಇಂಜೆಕ್ಷನ್‌ ನೀಡಿದ್ದು, (ಬೆಳ್ತಂಗಡಿ ಹಾಗೂ ಬಂಟ್ವಾಳ ತಲಾ 1, ಬಂಟ್ವಾಳ-7, ಸುಳ್ಯ-10). ಉಡುಪಿಯಲ್ಲಿ 2 ಮಂದಿಗೆ ನೀಡಲಾಗಿದೆ(ಕಾರ್ಕಳ-1, ಕುಂದಾಪುರ-1).

ಪುನೀತ್‌ ಹೃದಯ ಜ್ಯೋತಿ ಯೋಜನೆಯಿಂದ ಹೃದಯಾಘಾತ ಆಗುವಂತಹವರ ಜೀವ ಉಳಿಸಲು ಹೆಚ್ಚು ಅವಕಾಶ ಸಿಕ್ಕಿದಂತಾಗಿದೆ, ಗೋಲ್ಡನ್‌ ಅವರ್‌ ಅವಧಿಯಲ್ಲಿ ಅವರಿಗೆ ಅತ್ಯಗತ್ಯ ಚಿಕಿತ್ಸೆ, ಇಂಜೆಕ್ಷನ್‌ ನೀಡಿ ಮನೆಯ ಜ್ಯೋತಿ ಆರದಂತೆ ತಡೆಯಬಹುದಾಗಿದೆ.
-ಡಾ|ಎಚ್‌.ಆರ್‌.ತಿಮ್ಮಯ್ಯ/ಡಾ| ಐ.ಪಿ.ಗಡಾದ್‌
(ಜಿಲ್ಲಾ ಆರೋಗ್ಯಾಧಿಕಾರಿಗಳು ಮಂಗಳೂರು/ಉಡುಪಿ)

-ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next