Advertisement

ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಡೌಟು

09:30 PM May 08, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಗಣನೆ ಶುರುವಾದಂತೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಇಡೀ ವರ್ಷ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಈಗಾಗಲೇ ಜಿಲ್ಲೆಗೆ ಶೇ.70 ರಷ್ಟು ಪೂರೈಕೆಯಾಗಿರುವ ಪಠ್ಯ ಪುಸ್ತಕಗಳನ್ನು ಶಾಲೆಗೆ ತಲುಪಿಸುವ ಕಾರ್ಯ ಕೈಗೆತ್ತಿಕೊಂಡಿದೆ.

Advertisement

ಶಾಲೆ ಆರಂಭ ಹೊತ್ತಿಗೆ ಪಠ್ಯ ಪುಸ್ತಕ: ಜಿಲ್ಲೆಯಲ್ಲಿ 107 ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು 1,596 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಿಂದಿನ ವರ್ಷಗಳಲ್ಲಿ ಪಠ್ಯ ಪುಸ್ತಕ ಮಕ್ಕಳ ಕೈಗೆ ಸೇರುವುದು ವಿಳಂಬ ಆಗಬಾರದೆಂದು ಶಿಕ್ಷಣ ಇಲಾಖೆ ಈ ಬಾರಿ ಶಾಲೆ ಆರಂಭಗೊಳ್ಳುವ ಹೊತ್ತಿಗೆ ಮಕ್ಕಳ ಕೈಗೆ ಪಠ್ಯ ಪುಸ್ತಕ ಸೇರಿಸುವ ಕೆಲಸಕ್ಕೆ ಕೈ ಹಾಕಿದೆ.

ಜೂ.23ರೊಳಗೆ ಜಿಲ್ಲೆಗೆ ರವಾನೆ: ಜಿಲ್ಲೆಗೆ 1 ರಿಂದ 10ನೇ ತರಗತಿವರೆಗೂ ಇದುವರೆಗೂ ಶೇ.70 ರಷ್ಟು ಪಠ್ಯ ಪುಸ್ತಕಗಳು ಸರಬರಾಜುಗೊಂಡಿದ್ದು, ಉಳಿದ ಶೇ.30 ರಷ್ಟು ಪಠ್ಯ ಪುಸ್ತಕಗಳು ಮೇ.20ರ ಒಳಗೆ ಜಿಲ್ಲೆಗೆ ರವಾನೆಯಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ಬುಧವಾರ ತಮ್ಮನ್ನು ಸಂಪರ್ಕಿಸಿದ “ಉದಯವಾಣಿ’ಗೆ ಮಾಹಿತಿ ನೀಡಿದರು.

ಜೂನ್‌ 23 ರೊಳಗೆ ಎಲ್ಲಾ ಪಠ್ಯ ಪುಸ್ತಕಗಳು ಜಿಲ್ಲೆಗೆ ಬರಲಿದ್ದು, ಮೇ.23ರ ನಂತರ ಆಯಾ ಶಾಲೆಗಳಿಗೆ ತಾಲೂಕು ಕೇಂದ್ರಗಳಿಗೆ ಶಾಲೆಗೆ ವಿತರಿಸಲಿದ್ದು, ಜೂನ್‌ 1 ರೊಳಗೆ ಎಲ್ಲಾ ಮಕ್ಕಳಿಗೆ ಪಠ್ಯ ಪುಸ್ತಕ, ವರ್ಕ್‌ ಬುಕ್‌ಗಳನ್ನು ವಿತರಿಸಲಾಗುವುದು.

ಇದೇ ಮೊದಲ ಬಾರಿಗೆ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಡೈರಿ ವಿತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಳೆದ ವರ್ಷ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಡೈರಿ ವಿತರಿಸಲಾಗಿದೆ. ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಎಲ್ಲಾ ಮಕ್ಕಳಿಗೆ ಡೈರಿ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.

Advertisement

ಪಠ್ಯ ಪುಸ್ತಕ ಮಾರಾಟ ಆನ್‌ಲೈನ್‌: ಜಿಲ್ಲೆಯ ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೂ ಕೂಡ ಇಲಾಖೆ ವತಿಯಿಂದ ಪಠ್ಯ ಪುಸ್ತಕ ವಿತರಿಸಲಾಗುತ್ತಿದೆ. ಆದರೆ ಇಲಾಖೆ ಸಿದ್ಧಪಡಿಸಿರುವ ಆ್ಯಪ್‌ ಮೂಲಕ ಹಣ ಪಾವತಿಸಿ ಚಲನ್‌ ತಂದು ತೋರಿಸಿದರೆ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೂ ಇಲಾಖೆಯಿಂದಲೇ ಪಠ್ಯ ಪುಸ್ತಕ ವಿತರಿಸಲಾಗುವುದು. ಈಗಾಗಲೇ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಸಮವಸ್ತ್ರ ಇನ್ನೂ ಪೂರೈಕೆಯಾಗಿಲ್ಲ: ಶಿಕ್ಷಣ ಇಲಾಖೆ ಶಾಲೆ ಆರಂಭಗೊಳ್ಳುವುದಕ್ಕೂ ಮೊದಲೇ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ವರ್ಕ್‌ ಬುಕ್‌ಗಳನ್ನು ವಿತರಿಸಲಾಗುವುದೆಂದು ಹೇಳುತ್ತಿದ್ದರೂ ಸಮವಸ್ತ್ರ ವಿತರಿಸುವ ಬಗ್ಗೆ ಸ್ಪಷ್ಟವಾಗಿ ಏನು ಹೇಳುತ್ತಿಲ್ಲ. ಜಿಲ್ಲೆಗೆ ಲೋಡ್‌ಗಟ್ಟಲೇ ಪಠ್ಯ ಪುಸ್ತಕ ಸರಬರಾಜುಗೊಂಡಿದ್ದರೂ ಸಮವಸ್ತ್ರ ಮಾತ್ರ ಇನ್ನೂ ಪೂರೈಕೆಯಾಗಿಲ್ಲ. ರಾಜ್ಯ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಯದ ಕಾರಣ ಈ ಬಾರಿ ಶಾಲೆ ಆರಂಭಗೊಳ್ಳುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗುವುದು ಅನುಮಾನ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲೆಗೆ ಈಗಾಗಲೇ ಶೇ.70 ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಇನ್ನೂ ಶೇ.30 ರಷ್ಟು ಪಠ್ಯ ಪುಸ್ತಕಗಳು ಬರಬೇಕಿದೆ. ಜೂನ್‌ 1 ರೊಳಗೆ ಎಲ್ಲಾ ಶಾಲೆಗಳಿಗೂ ಪಠ್ಯ ಪುಸ್ತಕ ಸರಬರಾಜು ಮಾಡುವ ವ್ಯವಸ್ಥೆಯನ್ನು ಇಲಾಖೆ ರೂಪಿಸಿದೆ. ಆದರೆ ಇದುವರೆಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಾಗಿಲ್ಲ. ಈ ಬಾರಿ ಶಾಲೆಯ ಆರಂಭದಲ್ಲಿ ಮಕ್ಕಳಿಗೆ ಡೈರಿ ಸಹ ವಿತರಿಸಲಾಗುತ್ತಿದೆ.
-ಎಸ್‌.ಜಿ.ನಾಗೇಶ್‌, ಉಪ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next