ಬೆಂಗಳೂರು: ಗ್ರಾಮಪಂಚಾಯ್ತಿಯಲ್ಲಿ ಸಕಾಲ ಸೇವೆಯಡಿ ಅರ್ಜಿಗಳನ್ನು ಸ್ವೀಕರಿಸದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ನಾಗರಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದ ಮೂಲಕ ವಿತರಿಸುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ.
ಆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆಯ ಜಂಟಿ ನಿರ್ದೇಶಕರು ಇನ್ನು ಮುಂದೆ ಗ್ರಾಪಂಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೋಂದಣಿ ಮಾಡಿ ಜತೆಗೆ ಸಕಾಲ ಅರ್ಜಿ ಸಂಖ್ಯೆ (ಜಿಪಿಸಿ ಸಂಖ್ಯೆ) ನೀಡಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ಉಪ ಕಾರ್ಯದರ್ಶಿಗಳಿಗೆ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2011ರ ಅಡಿ ರಾಜ್ಯದ ಸುಮಾರು 6021 ಗ್ರಾಪಂಗಳಲ್ಲಿ ಸಕಾಲ ಸೇವೆಯನ್ನು ಜಾರಿಗೊಳಿಸಲಾಗಿದೆ. ಸಕಾಲ ಸೇವೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಸುಮಾರು ಹನ್ನೊಂದು ಸೇವೆಗಳು ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ಜನಿ ಕರಿಗೆ ದೊರೆಯಲಿವೆ. ಆದರೆ, ಕೆಲವು ಗ್ರಾಪಂಗಳಲ್ಲಿ ಸಕಾಲ ಸೇವೆಯಡಿ ಅರ್ಜಿ ಸ್ವೀಕಾರ ಮಾಡದೆ ಹಾಗೆಯೇ ನೀಡಲಾಗುತ್ತಿತ್ತು ಎಂಬ ದೂರುಗಳು ಬಂದಿದ್ದವು. ಹೀಗಾಗಿ, ಇಲಾಖೆಯು ಇದೀಗ ಸುತ್ತೋಲೆ ಮೂಲಕ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಸೂಚಿಸಿದೆ.
ಸಕಾಲದಲ್ಲಿರುವ ಸೌಲಭ್ಯಗಳು: ಗ್ರಾಪಂಗಳಲ್ಲಿ ಸಕಾಲ ಯೋಜನೆಯಡಿ ಕರ ನಿರ್ಧರಣಾ ಪಟ್ಟಿಯ ಬದಲಾವಣೆ, ಕಟ್ಟಡ ಪರವಾನಗಿ, ಸಾಮಾನ್ಯ ಪರವಾನಗಿ (ವಾಣಿಜ್ಯ ಪರವಾನಗಿ) ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ ಸೇರಿದೆ. ಜತೆಗೆ ಜನಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಮತ್ತು ಗ್ರಾಪಂಯಿಂದ ಕಡ್ಡಾಯವಾಗಿ ನಿರ್ವಹಿಸಬೇಕಾದ ಇತರ ದಸ್ತಾನುವೇಜುಗಳನ್ನು ನೀಡುವ ಸೇವೆಗಳು ಇದರಲ್ಲಿ ಸೇರಿವೆ. ಅಲ್ಲದೆ ಅಪರಿಣಿತ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಎಸ್ಕಾಂಗೆ ನಿರಾಕ್ಷೇಪಣಾ ಪ್ರಮಾಣ ಪತ್ರ, ನಮೂನೆ -9 ಮತ್ತು ನಮೂನೆ -11ಬಿ ನೀಡುವುದೂ ಪಟ್ಟಿಯಲ್ಲಿದೆ.
ಪಿಡಿಒಗಳ ವಿರುದ್ಧ ಶಿಸ್ತು ಕ್ರಮ: ಗ್ರಾಪಂಗಳಲ್ಲಿ ಸಕಾಲ ಅಧಿನಿಯಮದ ಉಲ್ಲಂಘನೆಗಳನ್ನು ತಡೆಗಟ್ಟುವ ಸಲುವಾಗಿ ಇನ್ನು ಮುಂದೆ ಸಕಾಲದ ಅರ್ಜಿ ಸಂಖ್ಯೆ ಇಲ್ಲದೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿ ಇಲ್ಲದೆ ವಿತರಿಸಲಾಗುವ ಯಾವುದೇ ಪ್ರಮಾಣ ಪತ್ರಗಳು ಕಾನೂನು ಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗ್ರಾಪಂಗಳಲ್ಲಿ ನಾಗರಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೋಂದಣಿ ಮಾಡದೆ ಸಕಾಲ ಅಧಿನಿಯಮ ಉಲ್ಲಂಘನೆಗೆ ಕಾರಣರಾದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಸಿವಿಲ್ ಸೇವಾ (ಸಿಸಿಎ) ನಿಯಮಗಳು, 1957ರ ಅನ್ವಯ ಶಿಸ್ತು ಕ್ರಮ ಜರುಗಿಸುವಂತೆ ಎಲ್ಲಾ ಜಿಪಂ ಸಿಇಒಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಪಂಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೋಂದಣಿ ಮಾಡದೆ ಸಕಾಲ ಅಧಿನಿಯಮದ ಉಲ್ಲಂಘನೆ ಮಾಡಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿಯೇ ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ನಾಗರಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಶದ ಮೂಲಕ ವಿತರಿಸುವಂತೆ ಸುತ್ತೋಲೆ ಹೊರಡಿಸಿದೆ.
-ಕಿಶೋರ್ ಕುಮಾರ್, ಬೆಂಗಳೂರು ಉತ್ತರ ತಾಲೂಕು ಇಒ
* ದೇವೇಶ ಸೂರಗುಪ್ಪ