“ಇದೊಂದು ಸಂಸ್ಕೃತ ಪದ …’
“ಸರ್ವಂ’ ಎಂದರೆ ಏನು ಎಂದು ಕೇಳುತ್ತಿದ್ದಂತೆಯೇ, ಉತ್ತರಿಸಿದರು ಸ್ವಾಮಿರಾಮ್ ದೇವರಮನೆ. ಪತ್ರಕರ್ತರು ಹೂಂಗುಟ್ಟಿದರು. ಸ್ವಾಮಿರಾಮ್ ಮುಂದುವರೆಸಿದರು. “ಹಾಗೆಂದರೆ, ಎಲ್ಲದರಲ್ಲೂ ಪರ್ಫೆಕ್ಟ್ ಎಂದರೆ. ಪರಿಪೂರ್ಣತೆ ಮತ್ತು ಪರಿಪಕ್ವತೆ ಎನ್ನಬಹುದು. ಆದರೆ, ಡಿಫರೆಂಟ್ ಆಗಿರಲಿ ಅಂತ “ಸರ್ವಂ’ ಅಂತ ಹೆಸರಿಟ್ಟಿದ್ದೇವೆ. ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಸಿನಿಮಾ ಮಾಡುತ್ತಿದ್ದೇವೆ. ಚಿತ್ರದಲ್ಲಿ ಇಬ್ಬರು ಹೀರೋಗಳು, ಇಬ್ಬರು ಹೀರೋಯಿನ್‌ಗಳು …’
ಹೀಗೆ ಹೇಳುತ್ತಾ ಹೋದರು ಅವರು. ಆಗಷ್ಟೇ “ಸರ್ವಂ’ ಚಿತ್ರದ ಮುಹೂರ್ತ ಮುಗಿದಿತ್ತು. ಸ್ವಾಮಿರಾಮ್ ಮತ್ತು ತಂಡದವರು ಮೊದಲ ಶಾಟ್ ಮುಗಿಸಿ, ಗಣಪತಿಗೆ ನಮಸ್ಕಾರ ಮಾಡಿ, ತೀರ್ಥ ಕುಡಿದು ಬಂದು ಮಾತಿಗೆ ಕುಳಿತಿದ್ದರು. ಮೂಹರ್ತಕ್ಕೆ ವಿಶ್ ಮಾಡುವವರು ಬರುತ್ತಲೇ ಇದ್ದರು. ಚಿತ್ರತಂಡದವರು ಪತ್ರಿಕಾಗೋಷ್ಠಿಗೆ ಕುಳಿತಿದ್ದರಿಂದ ದೂರವೇ ಕಾದು ನಿಂತಿದ್ದರು. ಅಷ್ಟರಲ್ಲಿ ಸ್ವಾಮಿರಾಮ್ ಮುಂದುವರೆಸಿದರು.
“ಈ ಚಿತ್ರದಲ್ಲಿ ಗಂಡ-ಹೆಂಡತಿಯ ಸಂಬಂಧದ ತೀಕ್ಷ್ಣತೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ. ಕೆಲವೊಮ್ಮೆ ಗಂಡ-ಹೆಂಡತಿ ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿದೆ ಅಂತ ಅಂದುಕೊಂಡಿರಿವಿ. ಆದರೆ, ಅಲ್ಲೇನೋ ಕೊರತೆ ಇದ್ದೇ ಇರುತ್ತದೆ. ಇದು ಕಾಲ ಮತ್ತು ಕರ್ಮದ ನಡುವಿನ ತಿಕ್ಕಾಟ. ಧರ್ಮ ಕಾಯುತ್ತೆ, ಕರ್ಮ ಸಾಯುತ್ತೆ ಅನ್ನೋ ಮಾತಿದೆಯಲ್ಲ. ಅದರ ಮೂಲಕ ಚಿತ್ರ ಮುಗಿಯುತ್ತದೆ. ನಾಲ್ಕು ಜನರ ಮಧ್ಯೆ ನಡೆಯುವ ಕಥೆ ಇದೆ. 35 ದಿನಗಳ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದೇವೆ’ ಎಂದರು.
ನಿರ್ದೇಶಕರು ಹೇಳಿದ್ದನ್ನು, ಬಹಳ ಸರಳೀಕರಿಸಿದರು ನಾಯಕ ಸುಜಯ್. “ಇದೊಂದು ಕಾರ್ಪೊರೇಟ್ ಜಗತ್ತಿನ ಚಿತ್ರ. ಅಲ್ಲಿ ದೊಡ್ಡ ಲೆವೆಲ್‌ನಲ್ಲಿ ಇರುವವರು ಮಹಿಳೆಯರನ್ನು ಹೇಗೆ ಟ್ರಾಪ್ ಮಾಡಿ ಬಳಸಿಕೊಳ್ಳುತ್ತಾರೆ ಎನ್ನುವುದು ಕಥೆ. ಇಲ್ಲಿ ನಾನು ಒಂದು ಕಂಪೆನಿಯ ಸಿಇಓ ಆಗಿರುತ್ತೀನಿ. ಹೇಗೆ ಮದುವೆಯಾದ ಹೆಣ್ಣನ್ನು ಬಳಸಿಕೊಳ್ಳುತ್ತೀನಿ ಮತ್ತು ಪಶ್ಚಾತ್ತಾಪವಾದಾಗ ಏನು ಮಾಡುತ್ತೀನಿ ಎಂಬುದು ಚಿತ್ರದ ಕಥೆ’ ಎಂದು ಇಡೀ ಕಥೆಯನ್ನು ಬಿಚ್ಚಿಟ್ಟಿರು.
ಈ ಹಿಂದೆ “ಮೋಂಬತ್ತಿ’ ಎನ್ನುವ ಚಿತ್ರ ಮಾಡಿದ್ದ ರವಿ, ಈ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಒನ್ ಆಫ್ ದಿ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಾಮಿರಾಮ್ ಅವರು ಹೇಳಿದ ಕಥೆ ಕೇಳಿ, ಈ ಚಿತ್ರವನ್ನು ನಿರ್ಮಿಸುವುದಕ್ಕೆ ಅವರು ಮುಂದಾದರಂತೆ. ಈ ಚಿತ್ರದಲ್ಲಿ ತಮಗೊಂದು ಒಳ್ಳೆಯ ಪಾತ್ರ ಇದೆ ಎಂದು ಅವರು ಹೇಳಿಕೊಂಡರು.
ಈ ಚಿತ್ರದಲ್ಲಿ ಪ್ರಿಯಾ ಹೆಗಡೆ ಮತ್ತು ಮೇಘನಾ ಸಾಕ್ಷಿ ನಾಯಕಿಯರಾಗಿ ನಟಿಸುತ್ತಿದ್ದಾರೆ.