ಕುಲು (ಹಿಮಾಚಲ ಪ್ರದೇಶ): “”ಈ ಬಾರಿಯ ಚುನಾವಣೆ ಬಿಜೆಪಿ ಪಾಲಿಗೆ ಧರ್ಮಯುದ್ಧವಾಗಿದ್ದು, ರಾಜ್ಯವನ್ನು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಲೋಪವನ್ನಾಗಿಸಿರುವ ಕಾಂಗ್ರೆಸ್‌ಗೆ ಪಾಠ ಕಲಿಸಲೆಂದೇ ಬಿಜೆಪಿ ಚುನಾವಣಾ ಅಖಾಡಕ್ಕೆ ಧುಮುಕಿದೆ” ಇದೇ ತಿಂಗಳ 9ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶದ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗುಡುಗಿದ ಪರಿಯಿದು.
ಇಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ರ್ಯಾಲಿಗಳನ್ನು ನಡೆಸುತ್ತಿರುವ ಮೋದಿ, ಭಾನುವಾರ ಕುಲುವಿನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನ “ಕಾಣದ ಕೈ’ಗಳು ಸಬ್ಸಿಡಿ ಹೆಸರಲ್ಲಿ 57 ಸಾವಿರ ಕೋಟಿ ರೂ. ನುಂಗಿದ್ದವು. ನಾನು ಅಧಿಕಾರಕ್ಕೆ ಬಂದ ನಂತರ ಇಷ್ಟು ಹಣ ಉಳಿಸಿದ್ದು, ಅದನ್ನು ಬಡವರ ಕಲ್ಯಾಣಕ್ಕೆ ಬಳಸಲಾಗುತ್ತಿದೆ ಎಂದರು. “”ಹಿಮಾಚಲದಲ್ಲಿನ ಭ್ರಷ್ಟಾಚಾರ, ಕಾನೂನು ಅವ್ಯವಸ್ಥೆಗಳಿಂದಾಗಿ ಕಾಂಗ್ರೆಸ್ ವಿರುದ್ಧ ಜನತೆ ರೊಚ್ಚಿಗೆದ್ದಿದ್ದಾರೆ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಇಲ್ಲಿ ಸೋತಿದೆ. ಹಾಗಾಗಿ, ಇದು ಬಿಜೆಪಿ ಪರವಾದ ಏಕಪಕ್ಷೀಯ ಚುನಾವಣೆ” ಎಂದರು.
ರಾಜೀವ್ ಚಿತ್ರಣ ನಿಜ: ರಾಜೀವ್ ಗಾಂಧಿ ಪ್ರಧಾನಿಯಾಗಿ ದ್ದಾಗ, ಕೇಂದ್ರದಿಂದ ಬರುವ 1 ರೂ. ಅನುದಾನದಲ್ಲಿ ಗ್ರಾಮೀಣ ಭಾಗ ತಲುಪುವುದು ಕೇವಲ 15 ಪೈಸೆಯಷ್ಟೇ ಎಂದಿದ್ದರು. ಆ ಮೂಲಕ ಆವರೆಗೆ ದೇಶ ಆಳಿದ್ದ ಕಾಂಗ್ರೆಸ್‌ನ ನೈಜ ಚಿತ್ರಣವನ್ನು ಅವರೇ ಕೊಟ್ಟಿದ್ದರು. ಭ್ರಷ್ಟಾಚಾರ ಪತ್ತೆ ಹಚ್ಚಿದ ರಾಜೀವರಿಗೆ ಅದನ್ನು ಮಟ್ಟಹಾಕಲು ಸಾಧ್ಯವಾಗಲಿಲ್ಲ. ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಪಕ್ಷ, ಮರ ಹಾಗೂ ಬೇರು ಇದ್ದಂತೆ ಎಂದರು ಮೋದಿ.
ಹೋರಾಟ ಮುನ್ನಡೆಸುವೆ: ಅಪನಗದೀಕರಣ, ಜಿಎಸ್‌ಟಿಗಳ ವಿರುದ್ಧ ಯಾವ ವರ್ತಕರೂ ಮಾತಾಡಿಲ್ಲ. ಅವುಗಳ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪ ಸುಳ್ಳು. ಯಾವುದೇ ಸ್ತರದ ಉದ್ಯಮಗಳಿಗೆ ಹೊರೆಯಾಗದಂತೆ, ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ. ಕಪ್ಪು ಹಣ, ತೆರಿಗೆ ಸೋರಿಕೆ ತಡೆಗಟ್ಟ ಲೆಂದೇ ಈ ಎರಡನ್ನು ಜಾರಿಗೊಳಿಸಲಾಗಿದ್ದು, ವಿರೋಧಿಗಳ ಪ್ರತಿಕೃತಿ ದಹನ, ಪ್ರತಿಭಟನೆಗಳಿಗೆ ಜಗ್ಗದೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ ಎಂದರು.
ಕಾಂಗ್ರೆಸ್ ವಾಗ್ಧಾಳಿ : ಇತ್ತ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಧರ್ಮಶಾಲಾದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ, “” ನೋಟ್ ಬ್ಯಾನ್, ಜಿಎಸ್‌ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಬೆದರಿಕೆ ಹುಟ್ಟಿಸುವ ಆಡಳಿತ ನೀಡುತ್ತಿದ್ದಾರೆ. ಅವರು ಮೈಕ್ ಮುಂದೆ ನಿಂತು “ಮಿತ್ರೋ…’ (ಸ್ನೇಹಿತರೇ) ಎಂದು ಸಂಬೋಧಿಸಿದ ಕೂಡಲೇ ಜನ ಬೆದರಲಾರಂಭಿಸುತ್ತಾರೆ” ಎಂದು ವ್ಯಂಗ್ಯವಾಡಿದರು. ಕೃಷಿ ಉತ್ಪನ್ನಗಳ ಮೇಲೆ ಶೇ.18, ಕೃಷಿ ಸಲಕರಣೆಗಳ ಮೇಲೆ ಶೇ. 12ರಷ್ಟು ಜಿಎಸ್‌ಟಿ ಹೇರಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಹಿಮಾಚಲ ಪ್ರದೇಶವನ್ನು ಪ್ರವಾಸಿಗರ ಸ್ವರ್ಗವನ್ನಾಗಿ ಸುವುದಾಗಿ 2014ರ ಮಹಾಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಯನ್ನು ಅವರು ಮರೆತರು ಎಂದೂ ಟೀಕಿಸಿದರು.