Advertisement
ಮೊದಲು ಬ್ಯಾಟಿಂಗ್ ನಡೆಸಿದ ಕಳೆದ ಸತತ 6 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮುನ್ನೂರರ ಗಡಿ ದಾಟಿದ್ದು ಸಾಮಾನ್ಯ ಸಂಗತಿ ಅಲ್ಲ. ಶನಿವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 399 ರನ್ ಪೇರಿಸಿದ್ದು ತಾಜಾ ಉದಾಹರಣೆ. ಇದಕ್ಕೆ ಕಾರಣವಾದದ್ದು ಹೆನ್ರಿಕ್ ಕ್ಲಾಸೆನ್ ಅವರ ಪ್ರಚಂಡ ಶತಕ. ಅವರು 67 ಎಸೆತಗಳಲ್ಲಿ 109 ರನ್ ಬಾರಿಸಿ ಅಬ್ಬರಿಸಿದರು.
“ನಿಜ, ವಿಶ್ವಕಪ್ ಮಟ್ಟಿಗೆ ನಾವು ನತದೃಷ್ಟರು. ಚೋಕರ್ ಎಂಬ ಟ್ಯಾಗ್‌ಲೈನ್ ನಮಗೆ ಅಂಟಿಕೊಂಡಿದೆ. ಮಹತ್ವದ ಪಂದ್ಯಗಳಲ್ಲಿ ನಾವು ಎಡವುತ್ತ ಬಂದಿದ್ದೇವೆ. ಆದರೆ ವಿಶ್ವಕಪ್ ಚರಿತ್ರೆಯನ್ನು ಗಮನಿಸುವಾಗ ನಾವು ಅದೆಷ್ಟೋ ಉತ್ತಮ ಪ್ರದರ್ಶನ ನೀಡಿದ ದೃಷ್ಟಾಂತಗಳಿವೆ. ಈ ಬಾರಿ ನಮ್ಮ ಆಟ ಅಮೋಘ ಮಟ್ಟದಲ್ಲಿದೆ. ಇದೇನೂ ಅಚ್ಚರಿಯಲ್ಲ. ಕಳೆದ 3 ವರ್ಷಗಳಿಂದ ನಾವು ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. ಹಂತ ಹಂತವಾಗಿ ಪ್ರಬುದ್ಧರಾಗುತ್ತಿದ್ದೇವೆ. ಒತ್ತಡದಲ್ಲೂ ದಕ್ಷಿಣ ಆಫ್ರಿಕಾ ಅತ್ಯುತ್ತಮ ಮಟ್ಟದ ಆಟವಾಡುತ್ತಿದೆ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ಸಾರುವ ಸಮಯವಿದು’ ಎಂಬುದಾಗಿ ವಿಕೆಟ್ ಕೀಪರ್-ಬ್ಯಾಟರ್ ಕ್ಲಾಸೆನ್ ಹೇಳಿದರು.
Related Articles
Advertisement
“ಓಪನರ್’ ಜಾನ್ಸೆನ್!ಹೆನ್ರಿಕ್ ಕ್ಲಾಸೆನ್‌ಗೆ ಅಮೋಘ ಬೆಂಬಲ ನೀಡಿದ ಮಾರ್ಕೊ ಜಾನ್ಸೆನ್ ಮೂಲತಃ ಆರಂಭಿಕ ಆಟಗಾರ. ಅವರ ಈ ಅನುಭವ ಇಲ್ಲಿ ನೆರವಿಗೆ ಬಂತು. ಅವರು ಏಕದಿನದಲ್ಲಿ ಬಾರಿಸಿದ ಮೊದಲ ಅರ್ಧ ಶತಕ ಇದಾಗಿದೆ. ಬಳಿಕ ಈ ಎಡಗೈ ಸೀಮರ್ ಡೇವಿಡ್ ಮಲಾನ್ ಮತ್ತು ಜೋ ರೂಟ್ ಅವರನ್ನು ಪೆವಿಲಿಯನ್‌ಗೆ ರವಾನಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
“ನಾನು ಯಾವತ್ತೂ ಬ್ಯಾಟಿಂಗ್ ಇಷ್ಟಪಡುತ್ತೇನೆ. ಮೂಲತಃ ನಾನೋರ್ವ ಓಪನರ್ ಆಗಿರುವುದೇ ಇದಕ್ಕೆ ಕಾರಣ. ಆದರೆ ಇಲ್ಲಿ ನಾವು 400ರ ಗಡಿ ಸಮೀಪಿಸಲಿದ್ದೇವೆ ಎಂದು ಭಾವಿಸಲೇ ಇರಲಿಲ್ಲ. 320ರಿಂದ 350 ರನ್ ನಮ್ಮ ನಿರೀಕ್ಷೆ ಆಗಿತ್ತು’ ಎಂದು ಜಾನ್ಸೆನ್ ಹೇಳಿದರು.