Advertisement

ರಿಟೈರ್‌ ಆಗೋ ಸಮಯ 

07:30 AM Apr 01, 2018 | |

ಯಾವುದೋ ಒಂದು ಸಂಸ್ಥೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ರಾಮಾ… ಕೃಷ್ಣಾ… ಎಂದು ಹಾಯಾಗಿ ಕಾಲ ಕಳೆಯಬಯಸುವ ಮಹನೀಯರ ಕುರಿತು ಖಂಡಿತವಾಗಿ ನನಗೆ ಯಾವ ಪೂರ್ವಾಗ್ರಹವೂ ಇಲ್ಲ ಎಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಯಾರೇ ಆಗಲಿ, ವರ್ಷಾನುಗಟ್ಟಲೆಯಿಂದ ಒಂದು ಜೀವನಕ್ರಮಕ್ಕೆ ಅಭ್ಯಸ್ಥರಾಗಿಬಿಟ್ಟಿದ್ದರೆ, ಏಕಾಏಕಿ ಆ ಕ್ರಮಕ್ಕೆ ಭಂಗ ಬಂದರೆ, ಮನಸ್ಸಿಗೆ ಕಿರಿಕಿರಿಯಾಗುವುದು ಸಹಜ. ಇನ್ನು ನಮ್ಮಿಚ್ಛೆಯಂತೆ ಬದುಕು ಕಟ್ಟಿಕೊಳ್ಳಬಹುದು. ಎಲ್ಲೆಂದರಲ್ಲಿ ತಿರುಗಾಡುತ್ತ, ಕಡಿದು ಹೋದಂತಿರುವ ಬಂಧುತ್ವದ ಸರಪಳಿಗೆ ಬೆಸುಗೆ ಹಾಕುತ್ತ, ಕರೆದವರ ಮನೆಯ ಸಮಾರಂಭಗಳಿಗೆ ಹಾಜರಿ ಹಾಕುತ್ತ… ಯೋಚಿಸಿದಂತೆ, ಯೋಜಿಸಿದಂತೆ ಹಾಯಾಗಿ ಕಾಲ ಹಾಕುವವರೂ ಉಂಟು. ವರ್ಷಕ್ಕೆರಡು ಪ್ಯಾಕೇಜ್‌ ಟೂರು ಹಮ್ಮಿಕೊಂಡು ಹೆಂಡತಿಯೊಡನೆ ಸುತ್ತಾಡುತ್ತಾ ನಿವೃತ್ತ ಬದುಕನ್ನು ಸುಖೀಸುವವರೂ ಇದ್ದಾರೆ. ನಾನು ಹೇಳಹೊರಟಿರುವ ವಿಷಯ ಅಂಥವರದ್ದಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡಂತೆ ಬೇರೆ ಕಡೆ ಗಮನ ಕೊಡದೆ ಮೂವತ್ತು, ಮೂವತ್ತೈದು ವರ್ಷಗಳಿಂದ ಗಾಣದೆತ್ತಿನಂತೆ ದುಡಿದ ಗಂಡಸರಿಗೆ, ಎಲ್ಲರಿಗೂ ಈ ಪದ ಅನ್ವಯಿಸುವುದಿಲ್ಲ ಎಂದು ನೀವು ಕೊಂಕು ತೆಗೆದರೆ ನನ್ನ ಆಕ್ಷೇಪಣೆಯೇನಿಲ್ಲ, ಮಾತಿಗೆ ಹೇಳುತ್ತಿದ್ದೇನೆ, ಅಷ್ಟೇ, ಇದ್ದಕ್ಕಿದ್ದಂತೆ ಒಂದು ದಿನ ನಾಳೆಯಿಂದ ನಿನಗೆ ಇಲ್ಲಿ ಪ್ರವೇಶವಿಲ್ಲ ಎನ್ನುವಂತೆ ಒಂದು ಹೂಹಾರ ಹಾಕಿ, ನೆನಪಿನ ಕಾಣಿಕೆ ಕೈಗಿತ್ತು, ಬೀಳ್ಕೊಟ್ಟಾಗ ನಿಂತ ನೆಲ ಕುಸಿದ ಅನುಭವವಾದರೆ, ಅದು ಅಸಹಜವೇನಲ್ಲ. ಇಪ್ಪತ್ನಾಲ್ಕು ಗಂಟೆ ಮನೆಯಲ್ಲೇ ಇರು ಅಂದರೆ ಗೃಹಬಂಧನ ಅನಿಸಿದರೆ ಆಶ್ಚರ್ಯವೇನಿದೆ? ಕೈಚೀಲ ಹಿಡಿದು ದಿನಸಿ, ತರಕಾರಿ ತರುವಂಥ, ಫೋನ್‌ ಬಿಲ್ಲು, ಲೈಟ್‌ ಬಿಲ್ಲು ಕಟ್ಟುವಂಥ ಕೆಲಸಗಳು ಜುಜುಬಿ ಅನ್ನಿಸಿಬಿಡುತ್ತವೆ. ಅವಕ್ಕೆಲ್ಲಾ ಎಷ್ಟು ಹೊತ್ತು ಬೇಕು? ತಾನೇ ಈ ಕೆಲಸ ಮಾಡಿ ರೂಢಿಯಾಗಿರುವ ಹೆಂಡತಿಗೆ ಗಂಡ ತರುವ ತರಕಾರಿ ಹಿತವಾಗುವುದಿಲ್ಲ. ಏನೋ ಒಂದು ಹುಳುಕು ಸಿಕ್ಕಿ ಅಸಹನೆಯ ಮಾತು ಬಾಯಿಂದ ಜಾರುತ್ತದೆ. ಗಂಡನಿಗೂ ಕೆರಳಿ ಸಣ್ಣದೊಂದು ಜಗಳ. “ನಾನು ಏನು ಮಾಡಿದ್ರೂ ನಿಂಗೆ ಸರಿಯಾಗಲ್ಲ’ ಎಂದು ಹೆಂಡತಿಯ ಮೇಲೆ ಗೂಬೆ. 

Advertisement

ನಿವೃತ್ತಿಯಾಗುತ್ತಿದ್ದಂತೆ ಕೆಲ ಗಂಡಸ ರಿಗೆ ಆರೋಗ್ಯದ ಕುರಿತಾದ ಕಾಳಜಿ ಜಾಗೃತ ವಾಗಿಬಿಡುತ್ತದೆ. ಇಷ್ಟು ದಿನ ತುರಿಸಿಕೊಳ್ಳುವುದಕ್ಕೂ ಪುರುಸೊತ್ತಿರಲಿಲ್ಲ. ಇನ್ನು ಮುಂದಾದರೂ ಯೋಗ, ಧ್ಯಾನ, ವಾಕಿಂಗು, ಅದು, ಇದು ಎಂದುಕೊಳ್ಳುತ್ತ ಅದಕ್ಕೆ ಬೇಕಾದ ತಯಾರಿ ನಡೆಯುತ್ತದೆ. ಹೆಂಡತಿಯೂ ತನಗೆ ಜೊತೆ ಕೊಡಲಿ ಎಂದು ಗಂಡನ ಆಂತರ್ಯ. “ನೀವು ಏನು ಬೇಕಾದ್ರೂ ಮಾಡ್ಕೊಳ್ಳಿ. ನನ್ನ ತಂಟೆಗೆ ಮಾತ್ರಾ ಬರ್ಬೇಡಿ…’ ಅನ್ನುತ್ತಾಳೆ ಹೆಂಡತಿ. ಏನೆಲ್ಲ ಮಾಡಬೇಕೆಂದುಕೊಂಡಿದ್ದು ಆರಂಭಶೂರತ್ವವಾಗುವುದೂ ಉಂಟು. ಹಟದಿಂದ ನಡೆಸಿಕೊಂಡು ಹೋಗುವವರೂ ಉಂಟು. 

“ಬೆಳಬೆಳಿಗ್ಗೆ ನಾಲ್ಕೂವರೆಗೆಲ್ಲ ಎದ್ದು ಲೈಟು ಹಾಕಿಕೊಂಡು ಈ ಗಿರಾಕಿ ಓಡಾಡ್ತಿದ್ರೆ ನಂಗೆ ನಿದ್ದೆ ಬರೋಕೆ ಸಾಧ್ಯಾನಾ? ವಾಕಿಂಗ್‌ ಹೋಗ್ಬೇಕಾದ್ರೆ ಬಾಗಿಲಿಗೆ ಬೀಗ ಹಾಕ್ಕೊಂಡು ಹೋಗ್ತಾರಾ, ಇಲ್ವಾಂತ ಅದು ಬೇರೆ ಚಿಂತೆ…’ ಎನ್ನುವ ಗೆಳತಿಯ ಮಾತು ಕೇಳಿ ನಾನು ನಕ್ಕು, ಅವಳ ಪಿತ್ತ ನೆತ್ತಿಗೇರಿತ್ತು. 

“ನಗ್ಬೇಡ ನೀನು, ನಾನೇನು ಕತೆಕಟ್ಟಿ ಹೇಳ್ತಿಲ್ಲ. ಬಾಗಿಲು ತೆಗೆದಿಟ್ಟು ಹಾಗೇ ಹೋದ ಉದಾಹರಣೆ ಉಂಟು ಅಂದ್ರೆ ನೀನು ನಂಬಿ¤àಯಾ? ಯಾರಾದ್ರೂ ಮನೆಗೆ ನುಗ್ಗಿ ತಲೆ ಒಡೆದು ಹಾಕಿದ್ರೆ ಆಮೇಲೆ?’  ಅರ್ಧೋಕ್ತಿಯಲ್ಲಿ ನಿಲ್ಲಿಸಿದವಳು, “ಪಾರ್ಕು ಓಡಿಹೋಗುತ್ತಾ? ಸಾಯಂಕಾಲ ವಾಕಿಂಗ್‌ ಹೋಗಿ’ ಅಂದ್ರೆ ಹೆಂಗಸರು ಕಾಲಿಗೆ ಅಡ್ಡಡ್ಡ ಬರ್ತಾರೆ ಅಂತಾರೆ ಕಣೇ. ಒಟ್ಟಿನಲ್ಲಿ ನಂಗೆ ಬೆಳಗಿನ ಜಾವ ನಿದ್ದೆ ಮಾಡೋ ಸುಖ ಇನ್ನು ಕನಸು ಎನ್ನುತ್ತಾ ಮರುಗಿದವಳನ್ನು ಯಾವ ಮಾತುಗಳಿಂದ ಸಂತೈಸಲಿ? ಗಂಡ ಮನೆಯಿಂದಾಚೆ ಹೋಗುತ್ತಿದ್ದಂತೆ ಎದ್ದು ಬಾಗಿಲಿಗೆ ಬೀಗ ಹಾಕಿದೆಯಾ ಎಂದು ಪರೀಕ್ಷೆ ಮಾಡಬೇಕಾದ್ದು ದಿನದ ಕರ್ಮ ಆಗಿಬಿಟ್ಟಿದೆ ಎಂದು ಅವಳ ಗೋಳು. ಈ ಕುರಿತು ಕೇಳಿದರೆ ಗಂಡ ಯಾವ ಸಮಜಾಯಿಷಿ ಕೊಡುತ್ತಾನೆಂದು ಕೇಳದೆಯೇ ನಾನು ಊಹಿಸಬಲ್ಲೆ. “ಏನೋ ಒಂದಿನ ಪರಾಮೋಷಿ ಆಯ್ತಪ್ಪಾ. ಕಡ್ಡೀನ ಗುಡ್ಡ ಮಾಡ್ತಾಳೆ’

ತಮ್ಮ ಆರೋಗ್ಯ ತಮ್ಮ ಕೈಯಲ್ಲಿ ಎನ್ನುವ ಇಂಥ‌ವರಿಗೆ ಇದ್ದಕ್ಕಿದ್ದಂತೆ ಆರೋಗ್ಯದ ಕಾಳಜಿ ಪರಾಕಾಷ್ಠೆಗೆ ಏರುವುದೂ ಉಂಟು. ಸಾರಿಗೆ ಹಾಕುವ ಉಪ್ಪು ಹೆಚ್ಚಾಗುತ್ತದೆ. ಚಟ್ನಿಯ ಖಾರ, ಕರಿದ ತಿಂಡಿ ಕೆರಳಿಸುತ್ತದೆ. ಇದಕ್ಕೆ ತಕ್ಕಂತೆ ಏನಾದರೂ ವಯೋಸಹಜ ಕಾಯಿಲೆ ಆರಂಭವಾಗಿದ್ದರೆ, ಅವರ ವಂಶದಲ್ಲಿ ಹೃದಯಾಘಾತದ ಹಿನ್ನೆಲೆ ಇದ್ದರೆ, ಪ್ರತಿಯೊಂದು ವಿಷಯದಲ್ಲೂ ಕಟ್ಟೆಚ್ಚರ. ತದ್ವಿರುದ್ಧ ಮನಃಸ್ಥಿತಿಯ ಗಂಡಸರೂ ಸಾಕಷ್ಟಿರುತ್ತಾರೆ. ಹೆಂಡತಿ ವಿಧಿಸುವ ನಿರ್ಬಂಧಗಳನ್ನು ಮೀರುವುದೆಂದರೆ ಅವರಿಗೆ ಪರಮಾನಂದ. ಹೆಂಡಂದಿರ ಕಟ್ಟುನಿಟ್ಟಿನ ಪಥ್ಯಪಾನಗಳಿಂದ ರೋಸಿ ಹೋಗಿ ಸಂದರ್ಭ ಸಿಕ್ಕಿದಾಗ ಆಕೆಯ ಮೇಲಿನ ಅಸಮಾಧಾನ ತೀರಿಸಿಕೊಳ್ಳುವವರಂತೆ ಕಂಠಮಟ್ಟ ತಿನ್ನುವುದೂ ಸುಳ್ಳೇನಲ್ಲ. ಏನಾದರೂ ಹೆಚ್ಚುಕಟ್ಲೆ ಇದ್ದಂತಹ ಕಡೆಗಳಿಗೆ ಸಪತ್ನಿàಕರಾಗಿ ಅಂಥವರು ಹಾಜರಿ ಹಾಕಿದ್ದರೆ ಉದ್ದೇಶಪೂರ್ವಕವಾಗಿ ಹೆಂಡತಿಯ ಕಣ್ಣಂಕೆಯಿಂದ ದೂರ ಕುಳಿತುಕೊಂಡು ಮನಸೋಇಚ್ಛೆ ತಿಂದು ತಮ್ಮ ಚಪಲ ತೀರಿಸಿಕೊಳ್ಳುತ್ತಾರೆ. ಗಂಡನ ಈ ಕಳ್ಳಾಟ ಗೊತ್ತಿರುವ ಹೆಂಡತಿ ಅವರ ಬೆನ್ನುಬಿಡದೆ ಮಗ್ಗುಲಲ್ಲೇ ಭೋಜನಕ್ಕೆ ಕುಳಿತು ಸಿಹಿ ಅನ್ನುವುದನ್ನು ಗಂಡನ ಎಲೆಗೆ ಸೋಕಿಸಗೊಡದೆ, ಗಂಡನಿಗೆ ಡಯಾಬಿಟೀಸ್‌ ಇರುವುದನ್ನು ಜಗಜ್ಜಾಹೀರುಗೊಳಿಸಿ ಪತ್ನಿàಧರ್ಮವನ್ನು ತಾನು ಯಾವುದೇ ಲೋಪ ಬಾರದಂತೆ ನಿಭಾಯಿಸುತ್ತಿದ್ದೇನೆನ್ನುವ ಕೃತಕೃತ್ಯತೆಯ ಭಾವದಿಂದ ಕೃತಾರ್ಥಳಾಗುವುದೂ ಉಂಟು. ಆಫೀಸಿಗೆ ಹೋಗುವ ಸಂದರ್ಭದಲ್ಲಿ ಊಟ ಕಟ್ಟಿಕೊಂಡು ಹೋಗಿ ಒಣಚಪಾತಿಯನ್ನು ಕಡಿಯುತ್ತಿದ್ದ, ಗಂಟಲು ಬಿಗಿಯುವ ತಣ್ಣನೆಯ ಅನ್ನವನ್ನು ನೀರು ಕುಡಿಯುತ್ತಾ ನುಂಗುತ್ತಿದ್ದ ಅದೆಷ್ಟೋ ಜನರಿಗೆ ನಿವೃತ್ತಿ ಅನ್ನುವುದು ಶೇಷಜೀವನವನ್ನು ತಿಂದು, ಕುಡಿದು ಸಂತೃಪ್ತವಾಗಿ ಕಳೆಯುವ ಬಯಕೆಯನ್ನು ಕೆರಳಿಸುವ ಕಾಲ. ಆರೋಗ್ಯ ಪೂರಕವಾಗಿದ್ದರೆ ಈ ಬಯಕೆಯ ಕಾವು ಮತ್ತಷ್ಟು ಜ್ವಲಿಸಿ ಮನೆಯೊಡತಿಯನ್ನು ದಹಿಸತೊಡಗುತ್ತದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ಕುರುಕಲು, ರಾತ್ರಿ ಮತ್ತೂಂದು ಬಗೆ ಎಂದು ಗಂಡ ಹಪಹಪಿಸುತ್ತಿದ್ದರೆ ಬಿಡುವಿನ ವೇಳೆಯಲ್ಲಿ ಹಾಯಾಗಿ ಟೀವಿ ಧಾರಾವಾಹಿಗಳಲ್ಲಿ ಕಳೆದುಹೋಗುತ್ತಿದ್ದವಳಿಗೆ ಬಿಡುವು ಅನ್ನುವುದು ಮರೀಚಿಕೆಯಾಗುತ್ತದೆ. ಗಂಡಸರಿಗೆ ರಿಟೈರ್‌ವೆುಂಟು ಉಂಟು, ನಮಗೇನಿದೆ? ಇರೋವರೆಗೆ ದುಡಿದೂ ದುಡಿದು ಎನ್ನುವ ಹತಾಶೆ ಕಾಡತೊಡಗುತ್ತದೆ. ಹೋಗಲಿ, ಗಂಡ ತನ್ನ ಕೈಲಾದ ಸಹಾಯ ಮಾಡಿಕೊಡುತ್ತೇನೆ ಎನ್ನುವ ಉಮೇದಿನಿಂದ ಒಳಗೆ ಬಂದರೆ ಅದಾದರೂ ಹಿತವಾಗುತ್ತದೆಯಾ? ತನ್ನಿಚ್ಛೆಗೆ ತಕ್ಕಂತೆ ಒಗ್ಗಿಸಿಕೊಂಡಿದ್ದ ಅಡುಗೆಮನೆಯ ತನ್ನ ಸಾಮ್ರಾಜ್ಯದಲ್ಲಿ ಬೇರೆಯವರು ಪ್ರವೇಶಿಸಿದರೆ ಇರಿಸುಮುರಿಸು. ಸಹಾಯಕ್ಕೆ ಬಂದವರು ಆಮೆವೇಗದಲ್ಲಿ ಕೆಲಸ ಮಾಡುವ ಪರಿ ಕಂಡು, “”ಮಾರಾಯೆ, ಆಚೆ ಹೋಗಿ ನೀವು” ಎಂದು ಹೇಳಲೇಬೇಕಾದ ಒತ್ತಡ ಕಾಡುತ್ತದೆ. ಗಂಡಯ್ಯನಿಗೆ ಬೇಕಾಗಿದ್ದೂ ಇಷ್ಟೇ. ಹಾಂ, ಹೆಚ್ಚಿನ ಹೆಂಗಸರ ಕಂಪ್ಲೇಂಟ್‌ ಒಂದಿದೆ. ಉದ್ಯೋಗದ ನೊಗಕ್ಕೆ ಕೊರಳೊಡ್ಡಿದವರು ಅದನ್ನು ಕೆಳಗಿಳಿಸುವವರೆಗೆ ಬೇರೆ ಯಾವ ಹವ್ಯಾಸವನ್ನೂ ಹಚ್ಚಿಕೊಳ್ಳದೆ, ರೂಢಿಸಿಕೊಳ್ಳದೆ, ಬೆಳಗಿನ ಕಾಫಿ ಕುಡಿಯುತ್ತ ಪೇಪರಿನ ಹೆಡ್‌ಲೈನುಗಳನ್ನಷ್ಟೇ ಗಮನಿಸಿ ಅಭ್ಯಾಸವಾಗಿದ್ದವರಿಗೆ ಟೀವಿ ಧಾರಾವಾಹಿಗಳು, ಕಾವ್ಯ, ಕತೆ, ಕಾದಂಬರಿ ಅಂದರೆ ಗಂಟಲಲ್ಲಿಳಿಯದ ಕಡುಬು. 

Advertisement

ಪತ್ನಿಯರನೇಕರ ದೊಡ್ಡ ಪುಕಾರು ಮತ್ತೂಂದಿದೆ. ಗಂಡ ತನ್ನ ಕೆಲಸಕ್ಕೆ ಕೈ ಜೋಡಿಸುವುದು ಬೇಡ, ಮಾಡಿದ ಕೆಲಸಕ್ಕೆ ಒಂದು ಮೆಚ್ಚುಗೆಯ ಮಾತಾಡಿದರೆ ನಾಲಿಗೆ ಸವೆಯುತ್ತದೆಯಾ? ಬೇಕಿದ್ದರೆ ಗಮನಿಸಿ, ಯಾವತ್ತೋ ಒಂದು ದಿನ ಅಡುಗೆಗೆ ಚಿಟಿಕೆ ಉಪ್ಪು ಜಾಸ್ತಿಯಾಗಿದ್ದರೆ ಬಲುಬೇಗ ಯಜಮಾನಿಕೆ ವಹಿಸಿಬಿಡುತ್ತದೆ ನಾಲಿಗೆ. “ಎರಡೆರಡು ಸಲ ಉಪ್ಪು ಹಾಕಿದ್ದಿ’ ಅನ್ನುವ ಉತ್ಪ್ರೇಕ್ಷೆಯ ಮಾತು ಬಾಯಿಂದ ಉದುರಿ ಬೀಳುತ್ತದೆ. ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಹಸಿಯೋ, ಬಿಸಿಯೋ, ಉಪ್ಪೋ, ಹುಳಿಯೋ ಗಮನಿಸುವ ಪುರುಸೊತ್ತಿಲ್ಲದೆ ತಿಂದು ಓಡುತ್ತಿದ್ದವರಿಗೆ ನಿವೃತ್ತರಾದ ನಂತರ ವಿಮರ್ಶಕ ಬುದ್ಧಿ ಜಾಗೃತವಾಗಿಬಿಡುತ್ತದೆ. ಆಯ್ತಪ್ಪಾ, ಹೇಳಲಿ, ಆದರೆ ಅಡುಗೆಯೋ, ತಿಂಡಿಯೋ ಚೆನ್ನಾಗಿದ್ದಾಗ ಯಾಕೆ ಒಂದು ಒಳ್ಳೆಯ ಮಾತು ಬಾಯಿಂದ ಬರುವುದಿಲ್ಲ? ಚೂರು ಹೆಚ್ಚುಕಮ್ಮಿಯಾದರೆ ಯಾಕೆ ನಾಲಿಗೆ ಉದ್ದ ಆಗುತ್ತೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಉಂಟಾ? 

ಗೋಡೆಯ ಮೂಲೆಯಲ್ಲಿ ಒಂದು ಜೇಡ ಬಲೆ ಕಟ್ಟಿರಬಹುದು, ಗುಡಿಸಿದ ಜಾಗದಲ್ಲಿ ತಲೆಕೂದಲಿನ ಒಂದು ಎಳೆ ಉಳಿದಿರಬಹುದು, ಗ್ಯಾಸ್‌ ಸ್ಟವ್‌ನ ಮೇಲೆ ಉಕ್ಕಿದ ಹಾಲನ್ನು ತಕ್ಷಣ ಒರೆಸಲು ಹೋಗದೆ ಕೊಂಚ ನಿರ್ಲಕ್ಷ್ಯ ತೋರಿಸಿರಬಹುದು, ಮನೆಯೊಳಗಿರುವ ಗಂಡಸರಿಗೆ ಈ ಲೋಪ ತಕ್ಷಣ ಕಣ್ಣಿಗೆ ರಾಚುತ್ತದೆ. “ಬಾರೇ ಇಲ್ಲಿ…’ ಎಂದು ಎಲ್ಲೋ ಇದ್ದ ಹೆಂಡತಿಯನ್ನು ಕರೆದು, ತಾವು ಕಂಡಿದ್ದನ್ನು ಕೈ ನೀಡಿ ತೋರಿಸಿ, “ಅಷ್ಟಕ್ಕೆ ನನ್ನ ಕರೀಬೇಕಾಗಿತ್ತಾ?’ ಎಂದು ಬಿ.ಪಿ. ಇರುವ ಹೆಂಗಸರು ತಕ್ಷಣ ಪ್ರತಿಕ್ರಿಯಿಸಬಹುದು. ಹೌದಲ್ವಾ? ಎಂದು ಗಂಡಸರಿಗೆ ಅನಿಸಬಹುದಾ? ಗೊತ್ತಿಲ್ಲ. ಮನೆವಾರ್ತೆ ಅಂದರೆ ಹೆಂಗಸರ ಜವಾಬ್ದಾರಿ ಎನ್ನುವ ನಂಬುಗೆ ಅವರಲ್ಲಿ ಮೈಯುಂಡು ಹೋಗಿದ್ದರೆ ಅವರಿಗೆ ಇಂಥ ಸೂಕ್ಷ್ಮಗಳು ಹೊಳೆಯುವುದಿಲ್ಲ. ಚೊಕ್ಕ, ಶುಭ್ರ ಎಂದು ಅತಿಯಾದ ಗೀಳು ಹಚ್ಚಿಕೊಂಡಿರುವ ಗಂಡಸರಾದರೆ, ಅವರು ನಿವೃತ್ತರಾಗಿ ಮನೆಯಲ್ಲಿರುವಂತಾದರೆ, ಅಂಥವರ ಹೆಂಡತಿಯನ್ನು ದೇವರೇ ಕಾಪಾಡಬೇಕು. 

ರಿಟೈರ್‌ ಆಗುತ್ತಿದ್ದಂತೆ ಕೆಲವರಲ್ಲಿ ದೇವರ ಮೇಲಿನ ಭಕ್ತಿ ಜಾಗೃತವಾಗುವುದು ಮತ್ತೂಂದು ಬದಲಾವಣೆ. ಗಂಡ ಶುಭ್ರಸ್ನಾತನಾಗಿ ಬರುವಷ್ಟರಲ್ಲಿ ದೇವರಮನೆಯಲ್ಲಿ ರಂಗೋಲಿಯ ಗೆರೆ ಎಳೆದು, ದೀಪದಕಂಬಗಳಲ್ಲಿ ಎಣ್ಣೆ, ಬತ್ತಿ ಜೋಡಿಸಿ, ಹೂಕೊಯ್ದು ತಂದಿಟ್ಟು, ಎಲ್ಲೂ ಅರೆಕೊರೆಯಾಗದಂತೆ ಹೆಂಡತಿ ಸಿದ್ಧ ಮಾಡಿಟ್ಟಿರಬೇಕು. ಇಲ್ಲದಿದ್ದರೆ ಅಸಹನೆಯ ಮಾತು ಗ್ಯಾರಂಟಿ.

ತುರುಬು ಮುಟ್ಟಿ ನೋಡಿಕೊಳ್ಳುವುದು ಎನ್ನುವ ಮಾರಣಾಂತಿಕ ಕಾಯಿಲೆಯ ಆರಂಭಿಕ ಲಕ್ಷಣ ಕೆಲಕೆಲವರಲ್ಲಿ ಕಾಣಿಸಿಕೊಳ್ಳುವುದು ನಿವೃತ್ತಿಯ ಈ ಮೊದಲ ಹಂತದಲ್ಲಿ. ವರ್ತಮಾನಕ್ಕಿಂತ ಭೂತಕಾಲದಲ್ಲಿ ಬದುಕುವುದು ಈ ಕಾಯಿಲೆಯ ಲಕ್ಷಣ. “ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು’ ಎನ್ನುವ ಕವಿವಾಣಿಯಂತೆ ಹಳೆಯದನ್ನು ಮೆಲುಕು ಹಾಕುತ್ತ, ಹಾಕುತ್ತ, ತಾನು ತನ್ನ ಅಧಿಕಾರಾವಧಿಯಲ್ಲಿ ಹೇಗಿದೆ, ಏನೇನು ಇಕ್ಕಟ್ಟು, ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಿ ಬುದ್ಧಿವಂತಿಕೆ ಮೆರೆದೆ ಎನ್ನುವುದನ್ನು ಕೇಳುವ ಕಿವಿಗಳಿದ್ದರೆ ಅಥವಾ ಸಂದರ್ಭಾಸಂದರ್ಭಗಳನ್ನು ಪರಿಗಣಿಸದೆ, ಅದದೇ ಪದಪುಂಜಗಳನ್ನುದ್ಧರಿಸುತ್ತ¤ ಬಣ್ಣಿಸುವ ಈ ಕಾಯಿಲೆ ಕ್ರಮೇಣ ಉಲ್ಬಣಾವಸ್ಥೆಗೆ ಏರಬಹುದೇ ಹೊರತು ವಾಸಿಯಾಗುವಂಥಾದ್ದಲ್ಲ ಎನ್ನುವುದು ದುರಂತ. ನಿವೃತ್ತರ ಒಂದು ಗುಂಪಿಗೆ ಸೇರ್ಪಡೆಯಾಗಿ ನಾಲಿಗೆ ತುರಿಕೆ ತೀರಿಸಿಕೊಳ್ಳಲಿ ಎಂದು ಪರವಾನಿಗೆ ಕೊಡಲು ಗೃಹಿಣಿಗೆ ಮನಸ್ಸಿಲ್ಲ. ತನ್ನ ಗಂಡ ಇನ್ನೂ ಆ ಗುಂಪಿಗೆ ಸೇರಿಕೊಳ್ಳುವಷ್ಟು ವಯಸ್ಸಾದವರೇನಲ್ಲ ಎನ್ನುವ ಒಪ್ಪಿಟ್ಟುಕೊಳ್ಳುವಿಕೆ. ನಿವೃತ್ತಿಯಾಗಿ ಮನೆಯಲ್ಲಿ ಖಾಲಿ ಕೂರುವ ಗಂಡಸರು ಯಾವುದೇ ಹವ್ಯಾಸ ಬೆಳೆಸಿಕೊಂಡಿಲ್ಲದಿದ್ದರೆ, ಹಾಗೆ ಯಾವುದಾದರೊಂದು ಹವ್ಯಾಸ ಬೆಳೆಸಿಕೊಂಡಿರುವವರು ತೀರಾ ಕಮ್ಮಿ ಅನ್ನುವ ವಿಷಯ ಪ್ರತ್ಯೇಕ, ಅವರಿಗೆ ಹೊತ್ತು ಕಳೆಯುವುದು ಅನ್ನುವುದು ದೊಡ್ಡ ತಲೆಬೇನೆಯಾಗುತ್ತದೆ. ಮನೆಯವರ ದೃಷ್ಟಿಯಲ್ಲಿ ತನ್ನ ಸ್ಥಾನಮಾನ ಒಂದಿಷ್ಟು ಕುಸಿದುಬಿಟ್ಟಿತು ಎಂದು ಕೆಲವರಿಗೆ ಅನುಮಾನ. ಹೊಸ ದಿನಚರಿಗೆ ಮನಸ್ಸನ್ನು ಒಗ್ಗಿಸಿಕೊಳ್ಳುವಲ್ಲಿ ಹೆಚ್ಚಿನವರು ತಾವು ಕಿರಿಕಿರಿ ಅನುಭವಿಸುವುದಲ್ಲದೆ ತಮ್ಮ ಕೈ ಹಿಡಿದವಳನ್ನೂ ಅದಕ್ಕೆ ಪಕ್ಕಾಗಿಸಿ “ಯಾಕಾದ್ರೂ ಇವರು ರಿಟೈರ್‌ ಆದ್ರೋ…’ ಅನ್ನಿಸಿಬಿಡುತ್ತಾರೆ. ನನ್ನ ತಮ್ಮನೊಬ್ಬ ನಿವೃತ್ತಿ ಜೀವನದ ಆರಂಭಿಕ ಹಂತದ ಈ ಕಿರಿಕಿರಿಯನ್ನು “ಗಂಡಸರ ಮೊನೋಪಾಸ್‌’ ಎಂದು ಎರಡೇ ಶಬ್ದಗಳಲ್ಲಿ ಹೇಳಿದ್ದು ಈ ಲೇಖನ ಬರೆಯಲು ನನಗೆ ಸ್ಫೂರ್ತಿ ಎಂದು ಉಲ್ಲೆಖೀಸುತ್ತ ಕೊನೆಯಲ್ಲಿ ಮತ್ತೂಂದು ಹೇಳಿಕೆಯೊಡನೆ ಬರವಣಿಗೆಗೆ ಮುಕ್ತಾಯ ಹಾಡುತ್ತೇನೆ. ದೀರ್ಘ‌ ಒಡನಾಟದ ಸಲುಗೆಯಿಂದ, ಸದರದಿಂದ, ಮುಚ್ಚಟೆಯಿಂದ ಹೆಮ್ಮಕ್ಕಳು ತಂತಮ್ಮ ಗಂಡಂದಿರ ಕುರಿತಾಗಿ ಹೀಗೆಲ್ಲ ಹೇಳಿಕೊಳ್ಳುತ್ತಾರೇ ವಿನಾ ಅವರನ್ನು ನೋಯಿಸುವ ಉದ್ದೇಶ ಖಂಡಿತ ಅವರಿಗಿರುವುದಿಲ್ಲ.

ವಸುಮತಿ ಉಡುಪ

Advertisement

Udayavani is now on Telegram. Click here to join our channel and stay updated with the latest news.

Next