Advertisement

ಸಕಾಲಕ್ಕೆ ರೈತರ ಖಾತೆಗೆ ಹಣ ಪಾವತಿಸಲಿ

04:52 PM Sep 21, 2018 | Team Udayavani |

ಯಾದಗಿರಿ: ಸರ್ಕಾರ ವರ್ತಕರ ನಡುವೆ ರೀಮ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಮಧ್ಯವರ್ತಿಗಳಿಗೆ ಸಲುಹಿದಂತಾಗುತ್ತಿದೆ ಎಂದು ಹೈದ್ರಾಬಾದ್‌ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಅಮರನಾಥ ಪಾಟೀಲ ದೂರಿದರು.

Advertisement

ನಗರದ ಎಪಿಎಂಸಿ ಆವರಣದಲ್ಲಿನ ದಿ ಗ್ರೀನ್‌ ಸೀಡ್ಸ್‌, ಕಾಟನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ರೈತರಿಂದ ತೊಗರಿ, ಉದ್ದು ಹಾಗೂ ಹೆಸರು ಧಾನ್ಯಗಳನ್ನು ಸರ್ಕಾರವೇ ನೇರವಾಗಿ ಖರೀದಿಸುತ್ತಿರುವುದು ಉತ್ತಮ ನಿರ್ಧಾರ. ಆದರೆ ರೈತರಿಗೆ ಸಕಾಲಕ್ಕೆ ಮಾರಾಟ ಮಾಡಿದ ಹಣ ನೀಡುತ್ತಿಲ್ಲ. ಇದರಿಂದ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಅನ್ನದಾತ ಸಂಕಷ್ಟದಲ್ಲಿ ಸಿಲುಕಿಕೊಳ್ಳುವಂತಾಗಿದೆ ಎಂದರು. 

ಸರ್ಕಾರ ರೈತರು ಬೆಳೆದ ಆಹಾರ ಧಾನ್ಯಗಳನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸುವ ವ್ಯವಸ್ಥೆ ಆರಂಭಿಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದಾಗಿ ರೈತರಿಗೆ, ಸರ್ಕಾರಕ್ಕೂ ಲಾಭ ದೂರದ ಮಾತು. ಖರೀದಿ ಕೇಂದ್ರಗಳ ನಿರ್ವಹಣೆಗೆ ಪ್ರತಿ ಕ್ವಿಂಟಲ್‌ ಬೆಳೆ ಖರೀದಿಗೆ 600 ರಿಂದ 700 ರೂ. ಸರ್ಕಾರ ಖರ್ಚು ಮಾಡುತ್ತಿದೆ ಎಂದರು.
 
ರೈತರಿಂದ ಕೇವಲ 10 ಕ್ವಿಂಟಲ್‌ ಮಾತ್ರ ಆಹಾರ ಧಾನ್ಯಗಳನ್ನು ಸರ್ಕಾರ ಖರೀದಿಸುತ್ತಿದ್ದು, ಆಹಾರ ಧಾನ್ಯಗಳನ್ನು ವರ್ಷವಿಡಿ ಗೋದಾಮಿನಲ್ಲಿ ಸಂಗ್ರಹ ಮಾಡಿದರೆ, ಅದರಲ್ಲಿನ ಪೌಷ್ಟಿಕಾಂಶ ಹಾಳಾಗಿ ಇಡೀ ಧಾನ್ಯಗಳು ತಿನ್ನಲು ಯೋಗ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಯಾದಗಿರಿ ದಿ ಗ್ರೀನ್‌ ಸೀಡ್ಸ್‌, ಕಾಟನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ವಿಶ್ವನಾಥ ರೆಡ್ಡಿ ಜೋಳದಡಗಿ ಮಾತನಾಡಿ, ರೈತರ ಹಿತ ಕಾಪಾಡುವಲ್ಲಿ ಹಾಗೂ ಅನ್ನದಾತನ ಸಂಕಷ್ಟಗಳಿಗೆ ನೆರವಾಗುವ ವರ್ತಕರನ್ನು ಸರ್ಕಾರ ದಿವಾಳಿ ಎಬ್ಬಿಸಬಾರದು, ಮಧ್ಯಪ್ರದೇಶ ಸರ್ಕಾರದ ಮಾದರಿಯಲ್ಲಿ ಮಾರುಕಟ್ಟೆ ಬೆಲೆಗೆ ರೈತರು ವರ್ತಕರ ಬಳಿ ಮಾರಾಟ ಮಾಡಿದ ನಂತರ ದಾಖಲೆ ಪಡೆದು ರೈತರ ಖಾತೆಗೆ ನೇರವಾಗಿ ಬೆಂಬಲ ಬೆಲೆಯನ್ನು ಸರ್ಕಾರ ಜಮಾ ಮಾಡುವುದರಿಂದ ರೈತರಿಗೆ ಅನುಕೂಲ ಆಗುವುದರ ಜೊತೆಗೆ ವರ್ತಕರು, ಹಮಾಲರು ಬದುಕುತ್ತಾರೆ. ಅಲ್ಲದೆ ಸರ್ಕಾರದ ವ್ಯರ್ಥ ಖರ್ಚು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಇತರೆ ರಾಜ್ಯದಲ್ಲಿ ಮಾರುಕಟ್ಟೆ ತೆರಿಗೆ ಕಡಿಮೆ ಇರುವುದರಿಂದ ಗಡಿ ಭಾಗದ ರೈತರು ಬೇರೆ ರಾಜ್ಯಗಳಲ್ಲಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. 

ಹಾಗಾಗಿ ಒಂದುವರೆ ಪ್ರತಿಷತ ಇರುವ ತೆರಿಗೆಯನ್ನು ಇಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತು ವರ್ತಕರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲ ಆಗುವ ಕುರಿತು ಮುಖ್ಯಮಂತ್ರಿಗಳ ಬಳಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಾಗುವುದು ಎಂದರು. 

Advertisement

ಎಪಿಎಂಸಿ ಸದಸ್ಯ ಸೋಮನಾಥ ಜೈನ್‌, ಶಶಿಕಾಂತ ಬಿ. ಪಾಟೀಲ, ಶ್ರೀಮಂತ ಉದನೂರ, ವಿನೋದ ಬಂಢಾರಿ, ಮಲ್ಲಿಕಾರ್ಜುನ ಅಕ್ಕಿ, ದಿನೇಶ ದೋಖಾ, ಶಿವರಾಜ ಇಂಗಿನಶೆಟ್ಟಿ, ಮಲ್ಲಿಕಾರ್ಜುನ ಕಟ್ಟಾ, ವಿಶ್ವನಾಥ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next