Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರೇಸ್‌ ಟೈಮ್‌ ರದ್ದು

11:11 AM Mar 23, 2017 | Harsha Rao |

ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ. ಬೆಳಗ್ಗೆ 9.30ಕ್ಕೆ ಪರೀಕ್ಷೆ ಪ್ರಾರಂಭಗೊಂಡ ನಂತರ ತಡವಾಗಿ ಬಂದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ.!

Advertisement

ಇಂತದ್ದೊಂದು ನಿಯಮ ಜಾರಿಗೆ ತರಲು ಪ್ರೌಢ ಶಿಕ್ಷಣ ಮಂಡಳಿ ಮುಂದಾಗಿದೆ. ಪರೀಕ್ಷಾ ಅಕ್ರಮ ತಡೆಗಟ್ಟುವುದು ಹಾಗೂ ವಿದ್ಯಾರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಇರುವಂತೆ ಮಾಡುವುದು ಇದರ ಉದ್ದೇಶ ಎಂದು
ಮೂಲಗಳು ತಿಳಿಸಿವೆ. ಈ ಹಿಂದೆ ಪರೀಕ್ಷೆ ಪ್ರಾರಂಭವಾದ ಹದಿನೈದು ನಿಮಿಷದವರೆಗೂ “ಗ್ರೇಸ್‌ ಟೈಂ’ ಎಂದು ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತಿತ್ತು.ಆದರೆ, ಈ ಬಾರಿ ಅದಕ್ಕೆ ಬ್ರೇಕ್‌ ಹಾಕಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿವೆ. ಪರೀಕ್ಷಾ ಅಕ್ರಮಗಳು ನಡೆಯಬಾರದು ಎನ್ನುವ ಕಾರಣಕ್ಕೆ ಇಲಾಖೆ ಈ ಬಾರಿ ಕಠಿಣ ಕ್ರಮ ಕೈಗೊಂಡಿದ್ದು, ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ತಡವಾಗಿ ಬರುವ ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸುವಂತೆ ಪರೀಕ್ಷಾ ಸಿಬ್ಬಂದಿಗೆ ಸೂಚನೆ
ನೀಡಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಸಂಗ್ರಹಿಸಿಡಲು 30 ಜಿಲ್ಲಾ ಖಜಾನೆಗಳು ಹಾಗೂ 174 ತಾಲೂಕು ಉಪ ಖಜಾನೆಗಳಿವೆ. ಅಗತ್ಯ ಭದ್ರತಾ ಸಿಬ್ಬಂದಿ ವ್ಯವಸ್ಥೆ ಇದ್ದು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸಾಗಿಸುವ
ವಾಹನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಜವಾಬ್ದಾರಿ ಹೊತ್ತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ರಾಜ್ಯ
ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಯಶೋಧ ಬೋಪಣ್ಣ ತಿಳಿಸಿದ್ದಾರೆ.

ಮಾ.30ರಿಂದ ಏ.12ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ
ರಾಜ್ಯಾದ್ಯಂತ ಮಾ.30ರಿಂದ ಏ.12ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ಏ.13ರಂದು ಜಿಟಿಎಸ್‌ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖೀಕ ಪರೀಕ್ಷೆಗಳನ್ನು ಆಯಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 2.45 ಗಂಟೆ ಬರೆಯಲು ಮತ್ತು 15 ನಿಮಿಷ ಓದಲು ಅವಕಾಶವಿದೆ. ದ್ವಿತೀಯ ಮತ್ತು ತೃತೀಯ ಭಾಷೆಗೆ 2.15 ಗಂಟೆ ಬರೆಯಲು ಹಾಗೂ 15 ನಿಮಿಷ ಓದಲು ನಿಗದಿ ಮಾಡಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬೆಳಗ್ಗೆ 9.30ರಿಂದ 12.30ರವರೆಗೆ ನಡೆಯಲಿವೆ. ದ್ವಿತೀಯ ಮತ್ತು ತೃತೀಯ ಭಾಷೆ ಪರೀಕ್ಷೆ ಬೆಳಗ್ಗೆ 9.30ರಿಂದ 12 ರವರೆಗೆ ನಡೆಯಲಿದೆ. ಪ್ರಥಮ ಭಾಷೆಗೆ 100 ಗರಿಷ್ಠ ಅಂಕಗಳು, ಉಳಿದ ವಿಷಯಗಳಿಗೆ
ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next