ಬೆಳಗಾವಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಸಲು ನೋಂದಣಿ ಮತ್ತು ಖರೀದಿಯ ಕಾಲಾವಧಿಯನ್ನು ವಿಸ್ತರಿಸಿದ್ದು ರೈತರಿಂದ ಖರೀದಿ ಪ್ರಮಾಣವನ್ನು ಹೆಚ್ಚಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಗೋಕಾಕ, ಅಥಣಿ, ತೇಲಸಂಗ, ಕನ್ನಾಳ, ರಾಮದುರ್ಗ, ಹುಲಕುಂದ, ಸವದತ್ತಿ, ಮುರಗೋಡ, ಬೈಲಹೊಂಗಲ ಮತ್ತು ದೊಡವಾಡಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ಕಡಲೆ ಕಾಳನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಖರೀದಿಸಲಾಗುತ್ತಿದೆ.
ಈ ಹಿಂದೆ ಪ್ರತಿ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಲ್‌ನಂತೆ, ಗರಿಷ್ಠ 10 ಕ್ವಿಂಟಲ್ ಕಡಲೆ ಖರೀದಿ ಪ್ರಮಾಣ ನಿಗದಿಪಡಿಸಲಾಗಿತ್ತು. ನೋಂದಾಯಿತ ರೈತರಿಂದ ಈಗಾಗಲೇ ಖರೀದಿಸಿರುವ ಕಡಲೆಯ ಪ್ರಮಾಣ ಸೇರಿ ಒಟ್ಟು ಪ್ರತಿ ಎಕರೆಗೆ 5 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಗೆ ನಿಗದಿಪಡಿಸಿ ಆದೇಶಿಸಿರುವುದಲ್ಲದೆ ರೈತರ ನೋಂದಣಿ ಅವಧಿಯನ್ನು ಮೇ 12 ವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಮೇ 25ರವರೆಗೆ ನಿಗದಿಪಡಿಸಲಾಗಿದೆ. ಕಾರಣ ನೋಂದಾಯಿತ ಮತ್ತು ಈಗಾಗಲೇ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವ ರೈತರು ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಬೆಳಗಾವಿ ಶಾಖಾ ವ್ಯವಸ್ಥಾಪಕರ ಮೊ. ಸಂಖ್ಯೆ-9449864445, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಗೋಕಾಕ ಶಾಖಾ ವ್ಯವಸ್ಥಾಪಕರು ಮೋ. ಸಂಖ್ಯೆ-9449864466 ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಥಣಿ ಶಾಖಾ ವ್ಯವಸ್ಥಾಪಕರು ಮೊ. ಸಂಖ್ಯೆ-9449864471ಗೆ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್ .ಬಿ. ಬೊಮ್ಮಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.