ಬೆಂಗಳೂರು: ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಬೆಂಬಲಿಗರು, ಕಾರ್ಯಕರ್ತರು ಮಂಗಳವಾರ ಬೆಳಗ್ಗೆ ಲಾಲ್‌ಬಾಗ್ ಪಶ್ಚಿಮ ದ್ವಾರ ಬಳಿಯ ನಿವಾಸದ ಬಳಿಕ ಜಮಾಯಿಸಿ ಧಿಕ್ಕಾರ, ಘೋಷಣೆ ಕೂಗುವುದು ಹೆಚ್ಚಾಗುತ್ತಿದ್ದಂತೆ ಮನೆಯಿಂದ ಹೊರಬಂದ ತೇಜಸ್ವಿನಿ ಅನಂತ ಕುಮಾರ್ ಅವರು ಸಮಾಧಾನಪಡಿಸಿದರು.
ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಮಹಿಳೆಯರಿಗೂ ಸಾಂತ್ವನ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಪ್ರತಿಕ್ರಿಯಿಸಿದ ತೇಜಸ್ವಿನಿ ಅನಂತಕುಮಾರ್, ದೇಶ ಮೊದಲು, ಪಕ್ಷ ಆಮೇಲೆ, ನಮ್ಮ ಹಿತಾಸಕ್ತಿಗಳು ಕೊನೆಗೆ. ಪ್ರತಿ ಸಂದರ್ಭವನ್ನು ಈ ದೃಷ್ಟಿಕೋನದಿಂದ ನೋಡಬೇಕು.
ಅದಮ್ಯ ಚೇತನ ಆರಂಭಿಸಿದ 22 ವರ್ಷದಿಂದ ಹಾಗೂ ಅನಂತ ಕುಮಾರ್ ಅವರನ್ನು ವಿವಾಹವಾಗಿ 30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತೆಯಾಗಿ ಈ ದೃಷ್ಟಿಕೋನದಿಂದಲೇ ಕೆಲಸ ಮಾಡುತ್ತಾ ಬಂದಿದ್ದೇನೆ. ಇದು ನಮಗೆ ಪ್ರಬದ್ಧತೆ ತೋರಿಸುವ ಸಂದರ್ಭ ಎಂದು ಮಾರ್ಮಿಕವಾಗಿ ನುಡಿದರು. ಪ್ರಶ್ನೆ ಸರಿ ಇರಬಹುದು, ವಿಳಾಸ ತಪ್ಪಿರಬಹುದು!
ಟಿಕೆಟ್ ಕೈತಪ್ಪಿದ್ದು, ಪ್ರಚಾರ ಆರಂಭಿಸಿದ್ದರೂ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದಿದ್ದುದು, ವರಿಷ್ಠರ ಭರವಸೆ ಇತರೆ ವಿಚಾರ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅನಂತ ಕುಮಾರ್ ಅವರು ಹೇಳುತ್ತಿದ್ದಂತೆ ಪ್ರಶ್ನೆ ಸರಿ ಇರಬಹುದು, ವಿಳಾಸ ತಪ್ಪಿರಬಹುದು ಎಂದು ಹೇಳಿ ನಕ್ಕರು.
ಬಿಜೆಪಿಯಲ್ಲೂ ವಂಶಾಡಳಿತ ಮುಂದುವರಿದಿದೆಯೆಲ್ಲಾ ಎಂಬ ಪ್ರಶ್ನೆಗೆ, ಪಕ್ಷಕ್ಕೆ ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಅನಂತ ಕುಮಾರ್ ಅವರು ಸಹ ಇದನ್ನೇ ಹೇಳುತ್ತಾ ಬಂದಿದ್ದರು. ಅವರ ನಂಬಿಕೆ ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದರು.
ದೇಶ ಗೆಲ್ಲಬೇಕು- ಪ್ರಚಾರ ನಿರಂತರ: ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಪರ ಪ್ರಚಾರ ನಡೆಸುತ್ತೀರಾ ಎಂಬ ಪ್ರಶ್ನೆ ಉತ್ತರಿಸಿದ ತೇಜಸ್ವಿನಿ ಅನಂತ ಕುಮಾರ್, “ಪ್ರಧಾನಿ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ. ಹಿಂದೆಯೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇದು ಮೊದಲ ಚುನಾವಣೆಯಲ್ಲ. ಮೊದಲು ದೇಶ ಗೆಲ್ಲಬೇಕು. ಅದಕ್ಕಾಗಿ ಪ್ರಚಾರ ನಿರಂತರ’ ಎಂದು ಹೇಳಿದರು.