Advertisement

ಗೊಂದಲ ನಿವಾರಣೆಗೆ ಕಾಲಾವಕಾಶ

04:33 PM Jun 24, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಗೊಂದಲ ಮುಂದುವರಿದಿದ್ದು, ಪರ ವಿರೋಧದ ಮನವಿಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಒಂದು ನಿರ್ಣಯಕ್ಕೆ ಬರಲು ಸರಕಾರ ಸಮಿತಿಯೊಂದನ್ನು ರಚಿಸಿದ್ದು ವರದಿ ನೀಡಲು ಮೂರು ತಿಂಗಳು ಕಾಲಾವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

Advertisement

ಅವರು ಇಲ್ಲಿನ ಸಹಾಯಕ ಕಮಿಷನರ್‌ ಕಚೇರಿ ಸಭಾಂಗಣದಲ್ಲಿ ಮೊಗೇರ ಸಮಾಜದ ಮುಖಂಡರ ಜೊತೆಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಗೊಂದಲ ಉಂಟಾಗಿದೆ. ಕಳೆದ ಹಲವಾರು ದಿನಗಳಿಂದ ಅವರು ಇಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರಕಾರ ಇವರ ಬೇಡಿಕೆ ಹಾಗೂ ಸರಕಾರಕ್ಕೆ ಸಲ್ಲಿಕೆಯಾಗಿರುವ ಇತರೆ ಮನವಿಗಳನ್ನು ಪರಿಗಣಿಸಿ ಪ್ರಸ್ತುತ ಅನುಸರಿಸುತ್ತಿರುವ ಮಾನದಂಡ ಮುಂದುವರಿಸುವ ಅಥವಾ ಮಾರ್ಪಾಡು ಮಾಡುವ ಕುರಿತು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಅವರೂ ಸೇರಿದಂತೆ ಐವರ ಸಮಿತಿಯೊಂದನ್ನು ರಚಿಸಿದ್ದು ಸಮಿತಿ ಮೂರು ತಿಂಗಳೊಳಗಾಗಿ ಸರಕಾರಕ್ಕೆ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದರು.

ಸಮಿತಿಯಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಿ.ಸಿ. ಪ್ರಕಾಶ ಅಧ್ಯಕ್ಷರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್‌, ಉತ್ತರ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಮೈಸೂರು ಮಾನವ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಗಂಗಾಧರ್‌ ಸದಸ್ಯರು ಹಾಗೂ ಉತ್ತರ ಕನ್ನಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದರು.

ಸಮಿತಿ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿದ್ದು ವರದಿ ಆಧಾರದ ಮೇಲೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಸಮಿತಿ ಮುಂದೆ ತಮ್ಮಲ್ಲಿರುವ ಪೂರಕ ದಾಖಲೆಗಳು ಹಾಗೂ ಅಗತ್ಯ ವಾದ ಮಂಡಿಸುವಂತೆ ಕೋರಿದ್ದೇನೆ ಎಂದು ಹೇಳಿದ ಜಿಲ್ಲಾಧಿಕಾರಿ ಅಲ್ಲಿಯತನಕ ತಮ್ಮ ಮುಷ್ಕರ ನಿಲ್ಲಿಸುವಂತೆ ಮೊಗೇರ ಸಮಾಜದ ಪ್ರಮುಖರಿಗೆ ಕೋರಲಾಗಿದೆ ಎಂದರು.

Advertisement

ಕೇವಲ ಒಂದು ಸಮಿತಿ ರಚನೆಮಾಡಲು ಸರಕಾರ, ಜಿಲ್ಲಾಡಳಿತ ಮೂರು ತಿಂಗಳಿಗೂ ಅಧಿಕ ಕಾಲ ತೆಗೆದುಕೊಂಡಿದ್ದು ಮುಷ್ಕರ ನಿರತರನ್ನು ನಿರ್ಲಕ್ಷಿದಂತಲ್ಲವೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ, ಸರಕಾರ ವಿವಿಧ ಸಭೆಗಳನ್ನು ನಡೆಸಿ ನಿರ್ಣಯ ಕೈಗೊಂಡಿದೆ. ಜಿಲ್ಲಾಡಳಿತ ಆಗಾಗ ವರದಿ ನೀಡುವುದರೊಂದಿಗೆ ಮುಷ್ಕರ ನಿರತರೊಂದಿಗೆ ಸಂಪರ್ಕ ಇಟ್ಟುಕೊಂಡಿದೆ. ಜಿಲ್ಲಾಡಳಿತದ ಸೂಚನೆಯಂತೆಯೇ ಅವರು ಶಾಂತಿಯುತವಾಗಿ ಮುಷ್ಕರ ನಡೆಸಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದೂ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್‌., ತಹಶೀಲ್ದಾರ್‌ ಡಾ| ಸುಮಂತ್‌ ಬಿ.ಇ. ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next